




ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯ ಬಳಿಕ ಭುಗಿಲೆದ್ದ ಭಿನ್ನಮತ ನಿವಾರಣೆಗೆ ನಂದಕುಮಾರ್ ಹಾಗೂ ಕೃಷ್ಣಪ್ಪರ ನಡುವೆ ಸಂಧಾನ ನಡೆಸಲಾಗಿದ್ದು, ಪ್ರಸ್ತುತ ವಿದ್ಯಮಾನದ ಕುರಿತು ಚರ್ಚಿಸಿ ಕಾರ್ಯಕರ್ತರ ಅಭಿಪ್ರಾಯ ಪಡೆದು ವರದಿ ನೀಡುವಂತೆ ರಮಾನಾಥ ರೈ ಯವರಿಗೆ ಸೂಚನೆ ನೀಡಲಾಗಿದೆ.
ಕೆಪಿಸಿಸಿ ಕಛೇರಿಯಲ್ಲಿ ನಡೆದ ನಂದಕುಮಾರ್ ಅಭಿಮಾನಿ ಬಳಗ ಮತ್ತು ಸುಳ್ಯ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯವರ ಸಭೆಯಲ್ಲಿ ಕೃಷ್ಣಪ್ಪರಿಗೆ ಘೋಷಣೆ ಮಾಡಿರುವ ಬಿ ಫಾರಂನ್ನು ಎರಡು ದಿನಗಳ ತನಕ ಕಾಯ್ದಿರಿಸಿದ್ದು, ಕೆಪಿಸಿಸಿ ತಂಡದಿಂದ ಮರು ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಮತ್ತು ಮಾಜಿ ಸಚಿವ ಬಿ. ರಮಾನಾಥ ರೈ ಯವರು ಸುಳ್ಯದಲ್ಲಿ ಸಭೆ ನಡೆಸಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ಎರಡೂ ವರದಿಯನ್ನು ಪರಿಗಣಿಸಿ ಬಿ ಫಾರಂನ್ನು ಪರಾಮರ್ಶೆ ನಡೆಸಿ ಅಧಿಕೃತ ಅಭ್ಯರ್ಥಿಗೆ ಬಿ ಫಾರಂ ನೀಡುವ ಬಗ್ಗೆ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಎ.15 ರಂದು ಅಪರಾಹ್ನ ರಮಾನಾಥ ರೈ ಸುಳ್ಯಕ್ಕೆ ಭೇಟಿ ನೀಡಲಿದ್ದು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.