ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕಿಯರಿಗೆ ಏ.2 ರಂದು ಸನ್ಮಾನ ಕಾರ್ಯಕ್ರಮವು ಬೆಳ್ಳಾರೆ ಗೃಹರಕ್ಷಕದಳದ ಘಟಕ ಕಛೇರಿಯಲ್ಲಿ ನಡೆಯಿತು. ಕುಮಾರಿ ಲಿಂಗಮ್ಮ ಇವರು 2015 ರಲ್ಲಿ ಗೃಹರಕ್ಷಕದಳದ ಸದಸ್ಯರಾಗಿ ಸೇರ್ಪಡೆಯಾಗಿ, 8 ವರ್ಷಗಳಿಂದ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಹಾಗೂ ಶ್ರೀಮತಿ ಸುನೀತಾ ರೈ, 2017 ರಲ್ಲಿ ಗೃಹರಕ್ಷಕದಳದ ಸದಸ್ಯರಾಗಿ ಸೇರ್ಪಡೆಯಾಗಿ, 6 ವರ್ಷಗಳಿಂದ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಇವರ ಸೇವಾ ಅವಧಿಯಲ್ಲಿ ಅನೇಕ ಬಂದೋಬಸ್ತು ಕರ್ತವ್ಯ, ಕವಾಯತು, ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಇವರು ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದು, ಬೆಳ್ಳಾರೆ ಗೃಹರಕ್ಷಕದಳದ ಸದಸ್ಯರಾಗಿರುತ್ತಾರೆ. ಅವರ ಸೇವೆಯನ್ನು ಗುರುತಿಸಿ, ಗೌರವಿಸಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸಮಾದೇಷ್ಟರು ಮಾತನಾಡಿ ನಿಷ್ಕಾಮ ಸೇವೆ, ಸೇವೆಯೇ ಪರಮಗುರಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಮಾಜ ಸೇವೆ ಮಾಡುತ್ತಾ ಕನಿಷ್ಠ ಗೌರವ ಧನಕ್ಕೆ ಕೆಲಸ ಮಾಡುವ ಗೃಹರಕ್ಷಕರು ನಮ್ಮ ದೇಶದ ಆಸ್ತಿ. ಜನರ ರಕ್ಷಣೆ ಮತ್ತು ಸಮಾಜದ ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ನೈಸರ್ಗಿಕ ಮತ್ತು ಮಾನವ ನಿರ್ಮಿತ ದುರಂತಗಳಾದಾಗ ಸಮಾಜವನ್ನು ರಕ್ಷಿಸುವಲ್ಲಿ, ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಗೃಹರಕ್ಷಕರು ಬಹುಮುಖ್ಯ ಭೂಮಿಕೆ ವಹಿಸಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ವಸಂತ್ ಕುಮಾರ್, ಹಾಗೂ ರಾಮಚಂದ್ರ,ಹೂವಪ್ಪ, ನಾರಾಯಣ,ಮಹೇಂದ್ರನ್ ಪದ್ಮನಾಭ ಹಾಗೂ ಇತರ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.
- Thursday
- November 21st, 2024