ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ.
ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ. ಸುಬ್ರಹ್ಮಣ್ಯ: ಕಾಡಾನೆ ಸೇರಿದಂತೆ ಇತರೆ ಕಾಡುಪ್ರಾಣಿಗಳಿಂದ ಕೃಷಿಕರು, ರೈತರು ಸೇರಿದಂತೆ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.ಫೆ.23 ರಂದು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕರಾದ ಕಿಶೋರ್ ಶಿರಾಡಿ ಅವರು “ಕಾಡಾನೆ, ಕಾಡುಪ್ರಾಣಿಗಳ ಹಾವಳಿಂದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲ್ಲೂಕಿನ ಜನರು ಹಲವಾರು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರೂ ಅದಕ್ಕೆ ಶಾಶ್ವತ ಪರಿಹಾರವನ್ನು ಸರ್ಕಾರ ಕೈಗೊಂಡಿಲ್ಲ. ಆದ್ದರಿಂದ ಸರ್ಕಾರ ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಂಡು ಕೃಷಿಕರು, ರೈತರು, ಜನರು ನಿರ್ಭೀತಿಯಿಂದ ಬದುಕು ನಡೆಸುವಂತೆ ಮಾಡಬೇಕಿದೆ. ಹಾಗೂ ಒಬ್ಬ ವ್ಯಕ್ತಿ ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟರೆ ಆ ವ್ಯಕ್ತಿಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಏಕೆಂದರೆ ಒಂದು ಕುಟುಂಬದಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಇರುತ್ತಾರೆ, ಒಂದುವೇಳೆ ಕುಟುಂಬದ ಯಜಮಾನ ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟರೆ ಆ ಕುಟುಂಬದ ಆಧಾರಸ್ತಂಭ ಬಿದ್ದು ಹೋಗುತ್ತದೆ. ಈಗ ನಾವು ಗಮನಿಸಿರಬಹುದು, ಒಂದು ಮನೆ ಕಟ್ಟಬೇಕಾದರೆ 50 60, 30 ಲಕ್ಷ ಖರ್ಚು ಮಾಡಿರುತ್ತಾರೆ. ಕನಿಷ್ಠ ಒಂದು 25 ಲಕ್ಷ ಸಾಲ ಮಾಡಿರುತ್ತಾರೆ. ಆದರೆ ಆ ಸಾಲವನ್ನು ತೀರಿಸಲು ಈ 15 ಲಕ್ಷ ರೂಪಾಯಿ ಪರಿಹಾರ ಹಣ ಸಾಕಾಗುತ್ತದೆಯೇ…? ಅದಕ್ಕಾಗಿ ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟ ಆ ವ್ಯಕ್ತಿಯ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ ಆ ವ್ಯಕ್ತಿಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಮತ್ತು ಆ ಕುಟುಂಬದ ಒಬ್ಬ ವ್ಯಕ್ತಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಬೇಕು. ಏಕೆಂದರೆ ಆವಾಗ ಆ ವ್ಯಕ್ತಿಗೆ ತನ್ನ ಮನೆಯಲ್ಲಿ ಆದಂತಹ ಅನಾಹುತ ಇನ್ನೊಂದು ಮನೆಯಲ್ಲಿ ಆಗಬಾರದು ಎಂಬ ಕಾಳಜಿ ಇರುತ್ತದೆ. ಮತ್ತು ಮುಂದೆ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬಂದಾಗ ಅವರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಹಾಗೂ ಮತ್ತೊಂದು ಮುಖ್ಯ ಅಂಶ ಏನೆಂದರೆ ಪ್ರತೀ ತಿಂಗಳಿಗೆ ಒಮ್ಮೆ ಡ್ರೋನ್ ಮುಖಾಂತರ ಜನವಸತಿ ಪ್ರದೇಶದ ಹತ್ತಿರದಲ್ಲಿ ಇರುವಂತಹ ಕಾಡುಗಳನ್ನು ಸರ್ವೇ ಮಾಡಬೇಕು. ಹುಲಿ, ಚಿರತೆ ಮುಂತಾದ ನರಭಕ್ಷಕ ಪ್ರಾಣಿಗಳು ಇದ್ದವೆಯೇ ಎಂದು ಸಮೀಕ್ಷೆ ಮಾಡಿ ನೋಡುತ್ತಿರಬೇಕು” ಎಂದರು.ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಲು ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ಹಾಗೂ ಜಾಗೃತಿ ಸಭೆ ನಡೆಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ತೀರ್ಮಾನಿಸಲಾಗಿದೆ. ಅರಣ್ಯ ಇಲಾಖೆ ಕಚೇರಿ ಬಳಿಯೂ ಪ್ರತಿಭಟನೆ ನಡೆಸಲಾಗುವುದು. ಮುಂದೆ ಮೂರು ತಾಲ್ಲೂಕುಗಳ ಜನರನ್ನು ಒಟ್ಟುಗೂಡಿಸಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ಸುಬ್ರಹ್ಮಣ್ಯದಲ್ಲಿ ಸಮಾಲೋಚನಾ ಸಭೆ ನಡೆಸಲಾಗುವುದು ಎಂದರು.ಕಾಡಾನೆ, ಕಾಡುಪ್ರಾಣಿ ಯಾವ ಭಾಗದಿಂದ ಈ ಭಾಗಕ್ಕೆ ಬರುತ್ತದೆ, ಯಾಕೆ ಬರುತ್ತದೆ ಎಂಬುದನ್ನು ಸರ್ಕಾರ ಕಂಡುಕೊಳ್ಳಲಿ. ಪಶ್ಚಿಮ ಘಟ್ಟದ ವಿದ್ಯುತ್ ಸ್ಥಾವರಗಳನ್ನು ಬಂದ್ ಮಾಡುವಂತೆ ಅವರು ಒತ್ತಾಯಿಸಿದರು. ರೈತರಿಗೆ ಸಂಬಂಧಿಸಿದ ಯಾವುದೇ ಕಾನೂನು ಅನುಷ್ಠಾನಕ್ಕೆ ತರುವ ಮೊದಲು ರೈತರ ಅಭಿಪ್ರಾಯ ಪಡೆದುಕೊಳ್ಳಬೇಕು. ಕಾಡುಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಬೇಕಿದೆ ಎಂದರು.ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಈ ಮೊದಲು ಹಲವಾರು ಪ್ರಾಣಹಾನಿ ಸಂಭವಿಸಿದ್ದರೂ ಸರ್ಕಾರ ಪೂರಕ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದ ಕಾರಣ ಅದು ಇಂದಿಗೂ ಮುಂದುವರಿದಿದೆ ಎಂದು ಅವರು ಆರೋಪಿಸಿದರು.ಈ ಸಂದರ್ಭದಲ್ಲಿ ಐನೆಕಿದು ಸುಬ್ರಹ್ಮಣ್ಯ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಪಂಜದ ಸವಿತಾರಾ ಮುಡೂರು, ಬಿಳಿನೆಲೆ ಗ್ರಾಮ ಪಂಚಾಯತ್ ಸದಸ್ಯರಾದ ಮುರಳೀಧರ ಎರ್ಮಾಯಿಲ್, ಕೊಂಬಾರು ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಪಿಲಿಕಜೆ, ಗಣೇಶ್ ಅನಿಲ, ದೇವರಾಜ್ ಕೆ ಕಟ್ಟ, ಶ್ರೀಕಾಂತ್ ಎನ್, ನಿತೀಶ್, ಮೋಹನ್ ಪೆರುಂದೋಡಿ, ಜೀವನ್ ಕುಮಾರ್ ಕೆ, ಪದ್ಮನಾಭ ಎ, ವಿನೋದ್, ಜಿತೇಂದ್ರ, ಕಾರ್ತಿಕ್ ಇವರುಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)