ಪೊಲೀಸ್ ಇಲಾಖೆಯ ನಿರ್ದೇಶನದಂತೆ ಸುಳ್ಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಗಾಂಧಿನಗರ ಪರಿಸರದಲ್ಲಿ ಪೊಲೀಸ್ ತನಿಖಾ ಕಾರ್ಯ ಮತ್ತು ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಫೆ.22ರಂದು ನಡೆಯಿತು.
ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮದ್ಯಪಾನ ಸೇವಿಸಿ ವಾಹನ ಚಾಲನೆ, ದಾಖಲೆ ಪತ್ರಗಳಿಲ್ಲದೆ ವಾಹನ ಚಾಲನೆ, ಪಾನ್ ಗುಟ್ಕಾ ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಅನುಮಾನಾಸ್ಪದ ವ್ಯಕ್ತಿಗಳ ತಪಾಷಣೆ, ಸಂಚಾರಿ ನಿಯಮ ಉಲ್ಲಂಘನೆ ಮುಂತಾದ 28ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡರು.
ಬಳಿಕ ನಡೆದ ಸಭೆಯಲ್ಲಿ ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ ಮತ್ತು ಉಪ ನಿರೀಕ್ಷಕ ದಿಲೀಪ್ ರವರು ಕಾನೂನು ಮಾಹಿತಿ ನೀಡಿ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಸಾರ್ವಜನಿಕರು ಯಾವುದೇ ರೀತಿಯ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಂದೇಶಗಳನ್ನು ಹಾಕದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕೆಂದು ಹೇಳಿದರು. ಕಾನೂನು ಬಾಹಿರ ಚಟುವಟಿಕೆ ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು. ಸಭೆಯಲ್ಲಿ ಸ್ಥಳೀಯ ಉದ್ಯಮಿಗಳು, ವಾಹನ ಚಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.