ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13ರಂದು ಮೊದಲ್ಗೊಂಡು ಫೆ.17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವೋಪೇತವಾಗಿ ಜರುಗಿತು. ಜಾತ್ರೋತ್ಸವದ ಪ್ರಯುಕ್ತ ಫೆ.13ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಸಂಜೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ದೀಪಾರಾಧನೆ ನಡೆಯಿತು. ರಾತ್ರಿ ಧ್ವಜಾರೋಹಣದ ಮೂಲಕ ವಿದ್ಯುಕ್ತವಾಗಿ ಜಾತ್ರೋತ್ಸವ ಆರಂಭಗೊಂಡಿತು. ನಂತರ ಬಯನ ಬಲಿ,ರಾತ್ರಿ ಪೂಜೆ,ನೃತ್ಯಬಲಿ ನಡೆಯಿತು. ಫೆ.14ರಂದು ಬೆಳಿಗ್ಗೆ ಗಣಪತಿ ಹವನ, ಉಷಾಃಪೂಜೆ,ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ ವಿತರಣೆ ನಡೆಯಿತು. ರಾತ್ರಿ ಶಿವೇಲಿ, ದರ್ಶನ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಫೆ.15ರಂದು ಬೆಳಿಗ್ಗೆ ಗಣಪತಿ ಹವನ, ಉಷಾಃಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ ವಿತರಣೆ ನಡೆಯಿತು. ರಾತ್ರಿ ರಾತ್ರಿಯ ಪೂಜೆ, ನೃತ್ಯ ಬಲಿ ನಡೆಯಿತು. ಫೆ.16ರಂದು ಬೆಳಿಗ್ಗೆ ಗಣಪತಿ ಹವನ,ಉಷಾಃಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶಿವೇಲಿ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಭೂತಬಲಿ, ಸೇವೆಸುತ್ತು, ಪೇಟೆ ಸವಾರಿ, ಸಿಡಿಮದ್ದು ಪ್ರದರ್ಶನ ನಡೆಯಿತು. ತದನಂತರ ರಾತ್ರಿ ಪೂಜೆ, ಶಯನ, ಕವಾಟಬಂಧನ ನಡೆಯಿತು. ಫೆ.17 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ತೈಲಾಭ್ಯಂಜನ, ಉಷಾಃಪೂಜೆ, ಆರಾಟುಬಲಿ ನಂತರ ಅವಭೃತ ಸ್ನಾನ ನಡೆದು ದರ್ಶನ ಬಲಿ ನಡೆಯಿತು. ಮಧ್ಯಾಹ್ನ ರಾಜಾಂಗಣ ಪ್ರಸಾದ, ಬಟ್ಟಲುಕಾಣಿಕೆ, ಧ್ವಜ ಅವರೋಹಣ ,ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಪ್ರಸಾದ ವಿತರಣೆಯಾಯಿತು. ರಾತ್ರಿ ಚಾಮುಂಡಿ ಅಗ್ನಿಗುಳಿಗ ದೈವದ ಭಂಡಾರ ತೆಗೆದು, ಭೂತಕೋಲ, ಬಟ್ಟಲುಕಾಣಿಕೆ ನಡೆಯುವುದರ ಮೂಲಕ ವಿಜೃಂಭಣೆಯ ಜಾತ್ರೋತ್ಸವ ಸಂಪನ್ನಗೊಂಡಿತು.
ದೇವಸ್ಥಾನದ ಆಡಳಿತಾಧಿಕಾರಿ, ನೂತನ ವ್ಯವಸ್ಥಾಪನ ಸಮಿತಿಯ ಸದಸ್ಯರು, ಅರ್ಚಕ ವೃಂದ, ಸಿಬ್ಬಂದಿಗಳು ಹಾಗೂ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀ ದೇವರ ಗಂಧಪ್ರಸಾದ ಸ್ವೀಕರಿಸಿದರು.