ಉಸಿರಾಟ ಎನ್ನುವುದು ನೈಸರ್ಗಿಕವಾದ ನಮಗರಿವಿಲ್ಲದೆ ಉಂಟಾಗುವ ಜೈವಿಕ ಪ್ರಕ್ರಿಯೆಯಾಗಿರುತ್ತದೆ. ಪ್ರತಿಯೊಬ್ಬ ಜೀವಿಗೂ ಅಗತ್ಯವಾದ ಆಕ್ಸಿಜನ್ ದೊರಕಿ, ಅನಗತ್ಯವಾದ ಕಾರ್ಬನ್ ಡೈಯಾಕ್ಸೈಡ್ ಮತ್ತು ಇತರ ಅನಿಲಗಳು ಉಸಿರಾಟದ ಮುಖಾಂತರ ಹೊರ ಹಾಕಲ್ಪಡುತ್ತದೆ. ನಾವು ಸೇವಿಸಿದ ಗಾಳಿ ನೇರವಾಗಿ ಶ್ವಾಸಕೋಶಕ್ಕೆ ಗಾಳಿ ಕೊಳವೆ ಅಥವಾ ಟ್ರೇಕಿಯಾ ನಾಳದ ಮುಖಾಂತರ ತಲುಪುತ್ತದೆ. ನಾವು ಗಾಳಿಯನ್ನು ಮೂಗು ಮತ್ತು ಬಾಯಿಯ ಮುಖಾಂತರ ಒಳಗೆ ಸೆಳೆದುಕೊಳ್ಳಬಹುದು. ಆರೋಗ್ಯವಂಥ ವ್ಯಕ್ತಿಗಳು ಮೂಗಿನ ಮುಖಾಂತರವೇ ಉಸಿರಾಟ ಮಾಡುತ್ತಾರೆ. ಆದರೆ ಕೆಲವೊಮ್ಮೆ ಮೂಗಿನಲ್ಲಿ ಅಡಚಣೆಯಾಗಿ ಗಾಳಿಯ ಸರಾಗ ಚಲನಗೆ ತೊಂದರೆ ಉಂಟಾದಾಗ ಬಾಯಿಯಿಂದ ಉಸಿರಾಡುವ ಅನಿವಾರ್ಯತೆ ಬರಲೂಬಹುದು. ಶೀತವಾಗಿ ಮೂಗು ಕಟ್ಟಿದಂತಾದಾಗ ಅಥವಾ ಅಲರ್ಜಿ ಉಂಟಾಗಿ ಮೂಗಿನಲ್ಲಿನ ಗಾಳಿ ಚಲನೆಗೆ ಅಡ್ಡಿಯಾದಾಗ ಬಾಯಿಯ ಮುಖಾಂತರ ಉಸಿರಾಡಬೇಕಾಗುತ್ತದೆ. ಕೆಲವೊಮ್ಮೆ ನಾವು ದೈಹಿಕ ಕಸರತ್ತು ಮಾಡುವಾಗ, ಓಡುವಾಗ ಅಥವಾ ಇನ್ಯಾವುದೇ ಕಠಿಣ ಪರಿಶ್ರಮದ ಕೆಲಸ ಮಾಡುವಾಗ ದೇಹದ ಸ್ನಾಯುಗಳಿಗೆ ಅಧಿಕ ಆಮ್ಲಜನಕದ ಅವಶ್ಯಕತೆ ಉಂಟಾದಾಗ, ಬಾಯಿಯ ಮುಖಾಂತರವೂ ಗಾಳಿ ಸೇವನೆ ಮಾಡುತ್ತೇವೆ. ಇದು ಸಹಜವಾದ ಜೈವಿಕ ಕ್ರಿಯೆ. ಆದರೆ ಯಾವುದೇ ಕಾರಣವಿಲ್ಲದೆ ಬಾಯಿಯ ಮುಖಾಂತರ ನಿರಂತರವಾಗಿ ಉಸಿರಾಡುವುದು, ಮತ್ತು ಮಲಗಿರುವಾಗ ಬಾಯಿ ತೆರೆದುಕೊಂಡು ಗಾಳಿ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ.
ಬಾಯಿಯ ಉಸಿರಾಟದಿಂದಾಗುವ ತೊಂದರೆಗಳು ಏನು?
- ಬಾಯಿಯ ಉಸಿರಾಟದಿಂದ ಬಾಯಿ ಒಣಗುತ್ತದೆ. ಎಂಜಲು ಸ್ರವಿಸುವಿಕೆ ಕಡಿಮೆಯಾಗಿ ಒಣ ಬಾಯಿ ಉಂಟಾಗಿ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸುತ್ತದೆ ಮತ್ತು ಬಾಯಿ ವಾಸನೆ ಬರುತ್ತದೆ.
- ಎಂಜಲು ಸ್ರವಿಸುವಿಕೆ ಕಡಿಮೆಯಾದಂತೆ ದಂತಕ್ಷಯ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ ಮತ್ತು ಒಸಡು ಮತ್ತು ಹಲ್ಲಿನ ಸುತ್ತಲಿನ ದಂತ ಪೊರೆ ಸಂಬಂಧಿ ರೋಗಗಳು ಜಾಸ್ತಿಯಾಗುತ್ತದೆ.
- ಗಂಟಲು, ಬಾಯಿ ಮತ್ತು ಕಿವಿಯಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿವಿ, ಬಾಯಿ, ಮತ್ತು ಗಂಟಲು ಇವೆಲ್ಲವೂ ಒಂದಕ್ಕೊಂದು ಸಂಪರ್ಕ ಹೊಂದಿರುವ ಕಾರಣ ಎಲ್ಲೊ ಒಂದೆಡೆ ಉಂಟಾದ ಸೋಂಕು, ಇನ್ನೊಂದೆಡೆಗೆ ಸುಲಭವಾಗಿ ಹರಡುತ್ತದೆ. ತೆರೆದ ಬಾಯಿಯ ಮುಖಾಂತರ ವೈರಾಣು ಮತ್ತು ಬ್ಯಾಕ್ಟೀರಿಯಾ ಬೇಗನೆ ಬಾಯಿಯೊಳಗೆ ಸೇರಿ ಸೋಂಕು ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
- ಮಕ್ಕಳು ನಿರಂತರವಾಗಿ ಬಾಯಿಯಿಂದ ಉಸಿರಾಟ ಮಾಡಿದರೆ ಮುಖದ ಗಾತ್ರ ಮತ್ತು ಚಹರೆ ಬದಲಾಗುವ ಸಾಧ್ಯತೆ ಇರುತ್ತದೆ. ಕೋಲು ಮುಖ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬಾಯಿಯ ಅಗಲ ಕಡಿಮೆಯಾಗಿ, ನಗುವಾಗ ವಸಡು ಕಾಣುವ ಸಾಧ್ಯತೆ ಇರುತ್ತದೆ. ಹಲ್ಲಿನ ಜಾಗ ಪಲ್ಲಟವಾಗಿ ಹಲ್ಲುಗಳು ಒಂದರ ಮೇಲೊಂದರಂತೆ ಎರಗಿಕೊಂಡು ಅಸಹ್ಯವಾಗಿ ಕಾಣಬಹುದು.
- ಬಾಯಿ ತೆರೆದು ಉಸಿರಾಟ ಮಾಡುವುದರಿಂದ ನಿದ್ರಾಹೀನತೆ ಉಂಟಾಗಿ, ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಕೆಲಸದಲ್ಲಿ ಖಿನ್ನತೆ ಮತ್ತು ನಿದ್ರಾ ಸಂಬಂಧಿ ರೋಗಗಳು ಬರಲೂಬಹುದು.
ಮೂಗಿನ ಉಸಿರಾಟದಿಂದ ಲಾಭವೇನು?
- ನಾವು ಯಾವತ್ತೂ ಮೂಗಿನ ಮುಖಾಂತರವೇ ಉಸಿರಾಟ ಮಾಡಬೇಕು. ಮೂಗಿನ ಒಳಭಾಗದಲ್ಲಿರುವ ಪದರದಲ್ಲಿನ ತೆಳುವಾದ ಕೂದಲು ಇರುವ ಕಣಗಳು, ನಾವು ಸೇವಿಸಿದ ಗಾಳಿಯಲ್ಲಿನ ಮಲಿನ ವಸ್ತುಗಳನ್ನು, ಧೂಳಿನ ಕಣಗಳನ್ನು ಪರಿಷ್ಕರಿಸಿ, ಶೋಧಿಸಿ, ಶುದ್ಧೀಕರಿಸಿ ಶ್ವಾಸಕೋಶಕ್ಕೆ ತಲುಪಿಸುವಲ್ಲಿ ಮಹತ್ವರ ಪಾತ್ರ ವಹಿಸುತ್ತದೆ.
- ನಾವು ಒಳ ಸೇವಿಸಿದ ಒಣಗಾಳಿಯನ್ನು ನಮ್ಮ ಮೂಗಿನೊಳಗಿನ ಪದರವು ಒದ್ದೆ ಮಾಡುತ್ತದೆ ಮತ್ತು ಒಣ ಗಾಳಿಯಿಂದ ಶ್ವಾಸಕೋಶ ಮತ್ತು ಟ್ರೇಕಿಯಾದ ಒಳಪದರಕ್ಕೆ ಉಂಟಾಗುವ ಹಾನಿಯನ್ನು ತಡೆಯುತ್ತದೆ.
- ನಾವು ಸೇವಿಸಿದ ತಣ್ಣಗಿನ ಗಾಳಿಯ ಉಷ್ಣತೆಯನ್ನು ನಮ್ಮ ದೇಹದ ಉಷ್ಣತೆಗೆ ಸರಿಪಡಿಸಿ ಆ ಮೂಲಕ ಶ್ವಾಸಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ.
- ಮೂಗಿನ ಒಳಪದರದಲ್ಲಿ ನೈಟ್ರಿಕ್ ಆಕ್ಸೈಡ್ ಎಂಬ ಅನಿಲ ಉತ್ಪತ್ತಿಯಾಗುತ್ತದೆ. ಇದು ಶ್ವಾಸಕೋಶದ ಆಮ್ಲ ಜನಕವನ್ನು ಹೀರಿಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಇದೇ ನೈಟ್ರಿಕ್ ಆಕ್ಸೈಡ್ ನಮ್ಮ ದೇಹದೆಲ್ಲೆಡೆ ಆಮ್ಲ ಜನಕದ ಪೂರೈಕೆ ಮಾಡುವ ಸಾಮಥ್ರ್ಯವನ್ನು ವೃದ್ಧಿಸುತ್ತದೆ. ಈ ಅನಿಲ ನಮ್ಮ ದೇಹದೊಳಗಿನ ರಕ್ತನಾಳಗಳಿನ ಸಣ್ಣ ಸ್ನಾಯುಗಳು ವಿಕಸಿಸುವಂತೆ ಮಾಡುತ್ತದೆ. ಮತ್ತು ರಕ್ತದ ಪೂರೈಕೆಯನ್ನು ಹೆಚ್ಚಿಸುತ್ತದೆ. ನೈಟ್ರಿಕ್ ಆಕ್ಸೈಡ್ ಅನಿಲಕ್ಕೆ ವೈರಾಣು, ಬ್ಯಾಕ್ಟೀರಿಯಾ ಮತ್ತು ಇತರ ಕೀಟಾಣುಗಳನ್ನು ನಾಶಪಡಿಸುವ ಶಕ್ತಿ ಹೊಂದಿದೆ. ಮತ್ತು ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿ ದೇಹಕ್ಕೆ ಸೋಂಕು ತಗಲದಂತೆ ಮಾಡುತ್ತದೆ.
ಒಟ್ಟಿನಲ್ಲಿ ಮೂಗಿನ ಮುಖಾಂತರ ಉಸಿರಾಟ ಮಾಡಿದಲ್ಲಿ ನಮಗೆ ಶುದ್ಧವಾದ, ಬೆಚ್ಚಗಿನ ಶುದ್ಧಿಕರಿಸಿದ ಮತ್ತು ಪರಿಷ್ಕರಿಸಿದ ಪರಿಶುದ್ಧ ಗಾಳಿ ದೊರೆತು ಆರೋಗ್ಯ ಪೂರ್ಣ ಜೀವನಕ್ಕೆ ಮುನ್ನುಡಿ ಬರೆಯುತ್ತದೆ.
ಕೊನೆ ಮಾತು :-
ಸಾಮಾನ್ಯವಾಗಿ ಬೆಳೆಯುವ ಮಕ್ಕಳಲ್ಲಿ ಬಾಯಿಯಲ್ಲಿ ಉಸಿರಾಡುವ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಮಕ್ಕಳಿಗೆ ಇದನ್ನು ಹೆತ್ತವರಲ್ಲಿ ಹೇಳಿಕೊಳ್ಳುವಷ್ಟು ಬುದ್ಧಿವಂತಿಕೆ ಬಂದಿರುವುದಿಲ್ಲ. ರಾತ್ರಿ ಹೊತ್ತು ಮಕ್ಕಳು ಜೋರಾಗಿ ಗೊರಕೆ ಹೊಡೆಯುವುದು, ರಾತ್ರಿ ಹೊತ್ತು ಪದೇ ಪದೇ ಅಳುವುದು, ನಿದ್ರಾ ಹೀನತೆ, ಮಕ್ಕಳ ತುಟಿಗಳು ಒಣಗುವುದು ಮತ್ತು ಬಿರಿದುಕೊಳ್ಳುವುದು, ಹಗಲು ಹೊತ್ತು ಜಾಸ್ತಿ ಮಲಗುವುದು, ಶಾಲೆಯಲ್ಲಿ ಓದಿನಲ್ಲಿ ನಿರಾಸಕ್ತಿ, ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಹೆತ್ತವರು ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳತಕ್ಕದು. ಪದೇ ಪದೇ ಗಂಟಲು ನೋವು ಮತ್ತು ಟೋನ್ಸಲ್ ತೊಂದರೆಯಿಂದ ಬಳಲುತ್ತಿದ್ದಲ್ಲಿ ತಕ್ಷಣವೇ ಗಂಟಲು ವೈದ್ಯರ ಬಳಿ ತೋರಿಸಿಕೊಳ್ಳತಕ್ಕದ್ದು. ಬಾಯಿಯಲ್ಲಿ ಉಸಿರಾಟ ಎನ್ನುವುದು ಸಣ್ಣ ಸಮಸ್ಯೆ ಅದರಿಂದ ಏನೂ ತೊಂದರೆಯಿಲ್ಲ ಎಂದು ಹೆತ್ತವರು ಮೂಗು ಮುರಿಯುವುದು ಮತ್ತು ನಿರ್ಲಕ್ಷ್ಯ ವಹಿಸುವುದು ಆಕ್ಷಮ್ಯ ಅಪರಾಧ. ದಿನ ಬೆಳಗಾಗುವುದರೊಳಗೆ ಯಾವುದೇ ತೊಂದರೆ ಆಗದಿದ್ದರೂ, ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಮಾರಕವಾಗಿ ಮಗುವಿನ ಆತ್ಮ ವಿಶ್ವಾಸಕ್ಕೆ ಬಹುದೊಡ್ಡ ಕೊಡಲಿ ಏಟು ಬೀಳುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿಯೇ ಹೆತ್ತವರು ತಕ್ಷಣವೇ ಆರಂಭಿಕ ಹಂತದಲ್ಲಿಯೇ ದಂತ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆದುಕೊಳ್ಳವುದರಲ್ಲಿಯೇ ಜಾಣತನ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
BDS MDS DNB MBA
MOSRCSEd
Consultant Oral And Maxillofacial Surgeon
9845135787
www.sutakshadental.com