
ಬೆಳ್ಳಾರೆ: ಪೆರುವಾಜೆಯಲ್ಲಿರುವ ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗವು ಪೆರುವಾಜೆ ಗ್ರಾಮದ ಮುಕ್ಕೂರು ವಾರ್ಡ್ ಅನ್ನು ಎರಡು ವರ್ಷಗಳ ಅವಧಿಗೆ ದತ್ತು ಸ್ವೀಕರಿಸಿದೆ.
ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಪೆರುವಾಜೆ ಗ್ರಾಮ ಪಂಚಾಯತ್, ಮುಕ್ಕೂರು ಸ.ಹಿ.ಪ್ರಾ.ಶಾಲೆ ಇದರ ಆಶ್ರಯದಲ್ಲಿ ದತ್ತು ಗ್ರಾಮ ಸ್ವೀಕಾರ ಉದ್ಘಾಟನಾ ಕಾರ್ಯಕ್ರಮವು ಫೆ.3 ರಂದು ಮುಕ್ಕೂರು ಶಾಲಾ ಸಭಾಂಗಣದಲ್ಲಿ ನಡೆಯಿತು.
ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಿಂದ ಪಡೆದುಕೊಳ್ಳುವ ಜತೆಗೆ ಪ್ರತಿಯಾಗಿ ನೀಡುವ ಸಾಮಾಜಿಕ ಜವಬ್ದಾರಿ, ಬದ್ಧತೆ ನಮ್ಮಲ್ಲೆರದ್ದಾಗಿದೆ. ಅದನ್ನು ವಿದ್ಯಾರ್ಥಿ ಜೀವನದಿಂದ ರೂಢಿಸಿಕೊಳ್ಳಲು ದತ್ತು ಗ್ರಾಮ ಯೋಜನೆ ಪೂರಕವಾದದು ಎಂದರು.
ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಉದ್ಘಾಟಿಸಿ ಮಾತನಾಡಿ, ಇದೊಂದು ಅತ್ಯುತ್ತಮ ಪ್ರಯತ್ನ. ಗ್ರಾಮದ ಆಡಳಿತದ ಜತೆಗೆ ಶಿಕ್ಷಣ ಸಂಸ್ಥೆಯು ಸಹಯೋಗ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದ ಅವರು ಮುಕ್ಕೂರು ವಾರ್ಡ್ ನಲ್ಲಿ ನಡೆಸುವ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾಂತರಾಜು ಸಿ ಮಾತನಾಡಿ, ಜನ ಸಮುದಾಯದ ಹತ್ತಿರ ಹೋಗಿ ಮಾಹಿತಿ ನೀಡುವ ಮೂಲಕ ಯಾವ ವರ್ಗಕ್ಕೆ ಯಾವ ಅನುಕೂಲತೆಗಳ ಅಗತ್ಯತೆ ಇದೆ ಎನ್ನುವ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಕಲೆ ಹಾಕುವ ಕೆಲಸ ಮಾಡಲಿದ್ದಾರೆ. ಶಾಲಾ ಶಿಕ್ಷಣ, ಆರೋಗ್ಯ ಸ್ಥಿತಿ ಗತಿ, ಎಲ್ಲ ಇಲಾಖೆಗಳ ಯೋಜನೆ, ಅನುಷ್ಠಾನದ ರೀತಿಗಳ ಬಗ್ಗೆ ಜನರಿಗೆ ಮಾಹಿತಿ ತಲುಪಿಸುವ ಕಾರ್ಯ ದತ್ತು ಗ್ರಾಮ ಯೋಜನೆಯ ಮೂಲಕ ಅನುಷ್ಠಾನ ಆಗಲಿದೆ ಎಂದರು.
ಮುಕ್ಕೂರು ಶಾಲಾ ಎಸ್ ಡಿಎಂಸಿ ಅದ್ಯಕ್ಷ ಜಯಂತ ಗೌಡ ಕುಂಡಡ್ಕ, ಪೆರುವಾಜೆ ಗ್ರಾಮ ಪಂಚಾಯತಿ ಪಿಡಿಓ ಜಯಪ್ರಕಾಶ್ ಅಲೆಕ್ಕಾಡಿ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಮುಕ್ಕೂರು ಸ.ಹಿ.ಶಾಲಾ ಮುಖ್ಯಗುರು ವಸಂತಿ, ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಂಯೋಜಕಿ ಅರ್ಚನಾ ಶುಭ ಹಾರೈಸಿದರು.
ಏನಿದು ದತ್ತು ಗ್ರಾಮ
2023 ರಿಂದ 2025ರವರೆಗೆ 2 ವರ್ಷ ಚಾಲ್ತಿಯಲ್ಲಿರುವ ದತ್ತು ಸ್ವೀಕಾರ ಚಾಲನೆಗೆ ಬಂದಿದೆ. ಗ್ರಾಮದ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಸ್ವಚ್ಛತೆ ಕ್ಷೇತ್ರ ಮತ್ತು ಸರಕಾರಿ ಸವಲತ್ತುಗಳ ಅನುಷ್ಠಾನ ಕ್ಷೇತ್ರವೂ ಸೇರಿದಂತೆ ಎಲ್ಲ ರಂಗಗಳ ಚಟುವಟಿಕೆಗಳನ್ನು ಪೆರುವಾಜೆ ಕಾಲೇಜು ವಾರ್ಡ್ ನಲ್ಲಿ ಕೈಗೊಳ್ಳಲಿದ್ದು, ಗ್ರಾಪಂ ಜತೆ ಸೇರಿಕೊಂಡು ಕಾರ್ಯಕ್ರಮ ನಡೆಸಲಿದೆ. ಸ್ವಚ್ಛತಾ ಚಟುವಟಿಕಗಳ ಅನುಷ್ಠಾನ, ಆರೋಗ್ಯ ಜಾಗೃತಿ, ರೋಗ ನಿಯಂತ್ರಣ ಜಾಗೃತಿ, ಸಾಮಾಜಿಕ ತರಬೇತಿಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗ ಭಾಗವಹಿಸಲಿದ್ದಾರೆ. ಗ್ರಾಪಂ ವತಿಯಿಂದ ನಡೆಸಬಹುದಾದ ಸಮೀಕ್ಷೆ, ಅಧ್ಯಯನ, ಅಭಿವೃದ್ಧಿ ಸರ್ವೆ ಪಡೆಯಲು ಅವಕಾಶವಿದೆ. ಜನಸಂಖ್ಯೆ, ತ್ಯಾಜ್ಯ ಸಂಸ್ಕರಣೆಯ ಬಗೆಗಿನ ಜಾಗೃತಿ ಇತ್ಯಾದಿ ವಿಚಾರಗಳಲ್ಲೂ ನೆರವು ಸಿಗಲಿದೆ.
ಈ ಸಂದರ್ಭದಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಎಂಜಿನಿಯರ್ ತೇಜಸ್ವಿ ನರಸಿಂಹ ಕಾನಾವು, ಪೆರುವಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ, ಸದಸ್ಯೆ ಗುಲಾಬಿ ಬೊಮ್ಮೆಮಾರು, ಎಸ್ ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ, ಸದಸ್ಯರಾದ ಲೋಕೇಶ್ ಬೀರುಸಾಗು ಮೊದಲಾದವರು ಉಪಸ್ಥಿತರಿದ್ದರು.
ಮುಕ್ಕೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಪ್ರಜ್ಞಾ ಸ್ವಾಗತಿಸಿ, ಹರ್ಷಿತ್ ಪೆರುವಾಜೆ ವಂದಿಸಿದರು. ಧನ್ಯಶ್ರೀ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ವಚ್ಚತಾ ಕಾರ್ಯ ನಡೆಯಿತು. ಪ್ರಾರಂಭದಲ್ಲಿ ಗಿಡ ನೆಡುವ ಮೂಲಕ ಉದ್ಘಾಟನೆ ನೆರವೇರಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಿಗೆ ಸ್ಮರಣಿಕೆ ರೂಪದಲ್ಲಿ ಹಣ್ಣಿನ ಗಿಡ ನೀಡಿ ಗೌರವಿಸಲಾಯಿತು.