ನಮ್ಮ ತುಳುನಾಡು ವೈವಿಧ್ಯಮಯವಾದ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಪ್ರದೇಶ. ಇಲ್ಲಿನ ಜನರು ಪ್ರಕೃತಿಯನ್ನೆ ತಮ್ಮ ದೈವ ದೇವರೆಂದು ಪೂಜಿಸುತ್ತ ಬಂದವರು. ನಮ್ಮ ತುಳುನಾಡಿನ ಪ್ರಕೃತಿ ಮತ್ತು ಬೌಗೋಳಿಕ ವಿನ್ಯಾಸ ಇಲ್ಲಿನ ಆಚರಣೆಗಳಿಗೆ ಪ್ರೇರಣೆ ನೀಡುತ್ತದೆ. ನಮ್ಮ ಪೂರ್ವಜರು ಈ ಮಣ್ಣಿನಲ್ಲಿ ಕಂಡು ಕೊಂಡ ಸತ್ಯಗಳು ಇಂದಿನ ಜನರಲ್ಲಿ ಹಾಸುಹೊಕ್ಕಾಗಿವೆ.ನಂಬಿಕೆ ಮತ್ತು ಆರಾಧನೆಯೆ ಇಲ್ಲಿನ ಜನರ ವಿಶೇಷತೆ.
ತುಳುನಾಡಿನ ಪ್ರಾಕೃತಿಕ ವಿನ್ಯಾಸ, ಇಲ್ಲಿನ ಸಂಸ್ಕೃತಿ, ಜನರ ಜನಜೀವನ, ಆರಾಧನ ಪದ್ಧತಿಗಳು , ಕಟ್ಟು ಪಾಡುಗಳು ಇಲ್ಲಿನ ಮಣ್ಣಿಗೆ ಹೊಂದಾಣಿಕೆಯಾಗುತ್ತವೆ. ಪ್ರಕೃತಿಯ ಜೊತೆ ಆರಾಧನೆ ಮಾಡಿಕೊಂಡು ಬಂದಿರುವ ಇಲ್ಲಿನ ಜನರ ಪ್ರತಿಯೊಂದು ಆಚರಣಾ ಪದ್ಧತಿಗೂ ವೈಜ್ಞಾನಿಕ ಸಂಬಂಧವಿದೆ. ಹಾಗಾಗಿ ಇಲ್ಲಿನ ಮೂಲ ಆರಾಧನ ಪದ್ಧತಿಗಳು ಬೇರೆ ಪ್ರದೇಶಗಳಲ್ಲಿ ಖಂಡಿತವಾಗಿಯೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ಇಲ್ಲಿನ ಯಾವುದೆ ಪ್ರಸಿದ್ಧ ಆರಾಧನ ಶಕ್ತಿಯನ್ನು ಇನ್ನೊಂದು ಕಡೆ ಎಲ್ಲಿಯೋ ಪ್ರತಿಷ್ಠಾಪನೆ ಮಾಡಿ ಗುಡಿಕಟ್ಟಲಾಗದು , ಯಾಕೆಂದರೆ ತುಳುನಾಡಿನ ಪ್ರತಿಯೊಂದು ಆರಾಧನ ಶಕ್ತಿಗಳು ತನ್ನದೆ ಆದ ಐತಿಹಾಸಿಕ ಹಿನ್ನೆಲೆ, ಸ್ಥಳವನ್ನು ಹೊಂದಿವೆ. ಅದರದ್ದೆ ಆದ ಜಾನಪದ ಕತೆಗಳು ಇವೆ.ಇಲ್ಲಿನ ಆರಾಧನ ಶಕ್ತಿಗಳಿಗೆ ಐತಿಹಾಸಿಕ ಹಿನ್ನೆಲೆ ,ಸಂಧಿ- ಪಾಡ್ದನಗಳೆ ಮುಖ್ಯ ಆಕಾರ. ದೈವ ದೇವರನ್ನು ಅಷ್ಟೇ ಭಯ ಭಕ್ತಿಯಿಂದ ಜನರು ಆರಾಧಿಸುತ್ತಾರೆ. ಹಾಗಾಗಿ ತುಳುನಾಡಿನ ಆಚಾರ ವಿಚಾರಗಳಿಗೂ ಆರಾಧನ ಪದ್ಧತಿಗಳಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿಯ ಜನ ಹುಟ್ಟಿದಾಗಿನಿಂದಲೂ ಆರಾಧನ ಪದ್ಧತಿಗೆ ಹೊಂದಾಣಿಕೆ ಆಗುವುದರಿಂದ ಮಕ್ಕಳು ಬಹುಬೇಗನೆ ಸಮಾಜಕ್ಕೆ ಹೊಂದಿಕೊಳ್ಳುತ್ತಾರೆ.ಒಂದು ಮಗು ಬೆಳೆಯುತ್ತಲೆ ಇಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳುತ್ತಾ ಬರುತ್ತದೆ. ಒಂದರ್ಥದಲ್ಲಿ ಜನರ ಹುಟ್ಟು ಸಾವುಗಳಿಗೂ ಆರಾಧನೆಗೂ ಒಂದಕ್ಕೊಂದು ಸಂಬಂಧ ಕಲ್ಪಿಸಲಾಗುತ್ತದೆ. ಯಾಕೆಂದರೆ ಮರಣ ಹೊಂದಿದ ವ್ಯಕ್ತಿಗಳನ್ನು ಕೂಡ ಪೂಜಿಸುವುದು , ಅಗೇಲು ಹಾಕುವ ಪದ್ಧತಿ ಇದೆ. ಅದು ಅಲ್ಲದೆ ಹಿಂದೆ ಅಕಾಲಿಕ ಮರಣ ಹಾಗೂ ನ್ಯಾಯಕ್ಕಾಗಿ ಹೋರಾಟ ಮಾಡಿ ಮರಣವಪ್ಪಿದ ಜನರು ದೈವತ್ವವನ್ನು ಪಡೆದು ಆರಾಧನೆ ಪಡೆದು ಕೊಂಡರು. ಪ್ರಕೃತಿಯಲ್ಲಿ ಇರುವ ಮೃಗಗಳು , ಪಕ್ಷಿಗಳು, ಹಾವುಗಳು, ಅಲೌಕಿಕ ಶಕ್ತಿಗಳಾಗಿ( ದೈವತ್ವವನ್ನು ಪಡೆದು) ಆರಾಧನೆ ಪಡೆದಕೊಂಡವು. ಇಲ್ಲಿ ಸೀಮೆ ,ಮಾಗಣೆ, ಗ್ರಾಮ,ಗುತ್ತು ಎಂಬ ಆಡಳಿತ ವರ್ಗಗಳಿದ್ದವು ( ಇವೆಲ್ಲವು ಆರಾಧನೆಯ ಮಹಾಕಾವ್ಯದಲ್ಲಿ ಸಿಗುತ್ತದೆ). ಇವೆಲ್ಲವೂ ಆರಾಧನೆಯ ಜೊತೆ ಅವಿನಾಭಾವ ಸಂಬಂಧ ಹೊಂದಾಣಿಕೆ ಆಗುವುದರಿಂದ ಇಲ್ಲಿರುವ ಯಾವುದೆ ದೈವ ದೇವರನ್ನು ಇನ್ನೆಲ್ಲಿಯೋ ಹೋಗಿ ಪ್ರತಿಷ್ಟಾಪನೆ ಮಾಡಿ ಗುಡಿಕಟ್ಟುವುದಕ್ಕಿಂತ , ಎಲ್ಲಿ ಮೂಲ ದೈವ ದೇವರ ಸಾನಿಧ್ಯಗಳಿವೆಯೋ ಅಲ್ಲಿಯೇ ಕೈ ಮುಗಿಯುವುದು ಒಳಿತು.
✍️ಭಾಸ್ಕರ ಜೋಗಿಬೆಟ್ಟು