ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.೧೪ರಂದು ದೈವಸ್ಥಾನದ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು. ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ. ಅಶೋಕ ಪ್ರಭು ಸುಳ್ಯ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಸುಧಾಮ ಆಲೆಟ್ಟಿ, ಕೆ.ಕೆ ಮಹಾಲಿಂಗೇಶ್ವರ ಭಟ್ ನೆಡ್ಚಿಲು , ಕೆ.ಕೆ ವೆಂಕಟ್ರಮಣ ಭಟ್ ನೆಡ್ಚಿಲು, ಜನಾರ್ಧನ ಗೌಡ ಗುಂಡ್ಯ, ನಾಲ್ಕು ಸ್ಥಾನಿಕ ಮನೆಯ ಪೂಜಾರಿಗಳಾದ ಮಾಧವಗೌಡ ಗುಂಡ್ಯ, ನಂಜುಂಡ ದೇವಸ್ಯ, ಪರಿವಾರ, ಪಂಜಿಮಲೆ ಮನೆಯವರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.
ಆಲೆಟ್ಟಿ ಶ್ರೀ ಸದಾಶಿವ ಕ್ಷೇತ್ರದ ಗುಂಡ್ಯ ಮಾಡಾರಮನೆ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ಧರ್ಮ ನಡಾವಳಿ ನೇಮೋತ್ಸವವು ಫೆ.2 ರಿಂದ 4ರ ತನಕ ವೇ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಹಾಗೂ ಧಾರ್ಮಕ ವಿಧಿ ವಿಧಾನಗಳೊಂದಿಗೆ ಜರುಗಲಿರುವುದು. ಜ.23 ರಂದು ಬೆಳಗ್ಗೆ ಮುಹೂರ್ತದ ಗೊನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ. ಫೆ.2ರ ಸಂಜೆ ಆಲೆಟ್ಟಿ ಸದಾಶಿವ ಭಜನಾ ಸಂಘದ ಸದಸ್ಯರಿಂದ ಮತ್ತು ಪುಂಡರೀಕ ನಾಯಕ್ ಮತ್ತು ಬಳಗ, ನವೋದಯ ಸ್ವ ಸಹಾಯ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಮರುದಿನ ಬೆಳಗ್ಗೆ ಉಗ್ರಾಣ ತುಂಬುವ ಕಾರ್ಯಕ್ರಮ ಬಳಿಕ ತಂತ್ರಿಯವರ ಆಗಮನವಾಗಿ ಗಣಪತಿ ಹವನ, ನವಕ, ನವಕಾಭಿಷೇಕ, ನಾಗ ತಂಬಿಲ, ಸಹಪರಿವಾರ ದೈವ ದೇವರ ತಂಬಿಲ ನಡೆದು ಮಹಾ ಪೂಜೆಯಾಗಿ ಪ್ರಸಾದ ವಿತರಣೆಯಾಗಲಿರುವುದು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಅನ್ನಸಂತರ್ಪಣೆಯಾಗಲಿದೆ. ರಾತ್ರಿ ಗಂಟೆ 7.00ರಿಂದ ಶ್ರೀ ಉಳ್ಳಾಕುಲು ಸಪರಿವಾರ ದೈವದ ಭಂಡಾರ ಏರಿ ಧರ್ಮ ನಡಾವಳಿ ನೇಮೋತ್ಸವವು ಜರುಗಲಿದ್ದು ಬಳಿಕ ವಾಲಸಿರಿ ಕಿರಿಯರ ನೇಮ ಹಿರಿಯರ ನೇಮ ನಡೆದು ಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಫೆ.೪ರಂದು ಬೆಳಗ್ಗೆ ಗಂಟೆ 9.00 ರಿಂದ ಸಪರಿವಾರ ದೈವದ ನೇಮೋತ್ಸವವು ನಡೆಯಲಿದೆ. ಶ್ರೀ ಮಲೆ ಚಾಮುಂಡಿ ದೈವ ಶ್ರೀ ಪುರುಷ ದೈವ, ಶ್ರೀ ಮದಿಮಾಳ್, ಶ್ರೀ ಅಜ್ಜಿ, ಶ್ರೀ ಪೊಟ್ಟನ್ ದೈವ, ಶ್ರೀ ಪಂಜುರ್ಲಿ ದೈವ, ಶ್ರೀ ಕೂಜಿ ದೈವದ ನೇಮೋತ್ಸವವು ನಡೆಯಲಿದೆ. ಆಗಮಿಸಿದ ಎಲ್ಲರಿಗೂ ಶ್ರೀಮುಡಿ ಗಂಧ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆಯಾಗಲಿರುವುದು ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಶೋಕ ಪ್ರಭುರವರು ತಿಳಿಸಿದ್ದಾರೆ.