ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲೆ, ಇದರ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪೆರಾಜೆ ಗ್ರಾಮ ಘಟಕದ ವತಿಯಿಂದ ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲಾಧಿಕಾರಿ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಅಡಿಕೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ಕುರಿತಂತೆ ಮನವಿ ಒಂದನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆ ರೈತ ಮುಖಂಡರು ಅಡಿಕೆ ಬೆಳೆಗಾರ ರೈತರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಬಹಳ ವಿವರವಾಗಿ ಚರ್ಚೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದರು. ರೋಗಬಾಧಿತವಾಗಿ ಹಾನಿಗೊಳಗಾದ ಅಡಿಕೆ ತೋಟಗಳಿಗೆ ಎಕ್ರೆವಾರು ಪರಿಹಾರ ನೀಡುವುದು, ಪರ್ಯಾಯ ಬೆಳೆಗಳಿಗೆ ಮತ್ತಷ್ಟು ಉತ್ತೇಜನ ನೀಡುವುದು, ಕೃಷಿಯಲ್ಲಿ ಯಾಂತ್ರೀಕರಣಕ್ಕೆ ಉತ್ತೇಜನ, ಜೇನು ಕೃಷಿಗೆ ಬೆಂಬಲ, ಅಡಿಕೆ ಬಾಧಿತ ರೋಗಗಳ ಕುರಿತಂತೆ ವಿಜ್ಞಾನಿಗಳು ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ಗ್ರಾಮ ಮಟ್ಟದಲ್ಲಿ ಸಂವಾದಗಳು ಹಮ್ಮಿಕೊಳ್ಳುವುದು, ಡ್ರೋಣ್ ಮುಖಾಂತರ ನಡೆಸುವ ಕೀಟನಾಶಕಗಳ ಸಿಂಪರಣೆ ಕುರಿತಾಗಿ ವೈಜ್ಞಾನಿಕ ಅಧ್ಯಯನಗಳ ಆಧಾರದಲ್ಲಿ ರೈತರಿಗೆ ಮಾಹಿತಿ ನೀಡುವುದು, ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಜಿಲ್ಲಾಧಿಕಾರಿಗಳಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯ ಮಾಡ ಮನುಸೋಮಯ್ಯ ಮತ್ತು ಕಾರ್ಯದರ್ಶಿ, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಉಪಸ್ಥಿತರಿದ್ದು ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ ಇದರ ಅಧ್ಯಕ್ಷರಾದ ಬಾಲಕೃಷ್ಣ , ಕಾರ್ಯದರ್ಶಿ ಪುರುಷೋತ್ತಮ ಬಂಗಾರಕೋಡಿ ಮತ್ತು ಘಟಕದ ಪದಾಧಿಕಾರಿಗಳಾದ ಗೋಪಾಲ ಪೆರಾಜೆ , ಉಮೇಶ ಕುಂಬಳಚೇರಿ, ನೆಕ್ಕಿಲ ಗಂಗಾಧರ, ವೇಣುಗೋಪಾಲ ಕುಂದಲ್ಪಾಡಿ ಮತ್ತು ಸಂಜೀವ ಕತ್ಲಡ್ಕ ಹಾಜರಿದ್ದರು.
- Friday
- November 1st, 2024