ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕನಸುಗಳಿರುತ್ತವೆ, ಏನಾದರೂ ಸಾಧಿಸ್ಬೇಕು ಅನ್ನೋ ಆಕಾಂಕ್ಷೆ ಇರುತ್ತದೆ. ಹಾಗಂತ ಸಾಧನೆ ಅನ್ನೋದು ಅಂದುಕೊಂಡ ತಕ್ಷಣ ಸಿಗುವಂಥದ್ದಲ್ಲ ಅಥವಾ ಒಂದೆರಡು ದಿನದಲ್ಲಿ ಆಗುವಂಥದ್ದಲ್ಲ.
ಈಗ ಒಬ್ಬ ವ್ಯಕ್ತಿ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಿದ್ದಾನೆ ಅಂದ್ರೆ ಅವನೇನು ಒಂದೆರಡು ದಿನದಲ್ಲಿ ಆ ಮಟ್ಟಕ್ಕೆ ಬೆಳೆದಿರುವುದಿಲ್ಲ ಅಥವಾ ಸಾಧನೆ ಮಾಡಿರುವುದಿಲ್ಲ. ಆದರೆ ನಮಗೆ ನೋಡುವವರಿಗೆ ಅವನ ಸಾಧನೆ ಮಾತ್ರ ಕಾಣುತ್ತದೆ ಮತ್ತು ಅವನು ಹೇಗೆ ಅಷ್ಟು ಸುಲಭದಲ್ಲಿ ಮೇಲೆ ಬಂದ ಅನ್ನೋ ಪ್ರಶ್ನೆ ಮಾತ್ರ ಕಾಡುತ್ತದೆಯೇ ಹೊರತು ಅವನ ಆ ಸಾಧನೆಯ ಹಿಂದಿರುವ ಕಠಿಣ ಪರಿಶ್ರಮ, ಅವನ ಸಾಧನೆಯ ಹಾದಿಯಲ್ಲಿನ ನೂರಾರು ಸೋಲುಗಳು, ಸೋಲನ್ನು ಸೋಲಿಸುವ ಅವನ ಛಲ, ಕಷ್ಟಗಳನ್ನು ಎದುರಿಸಿ ಮುನ್ನುಗ್ಗುವ ಅವನ ಧೈರ್ಯ, ಗೆದ್ದೇ ಗೆಲ್ಲುವೆ ಎನ್ನುವ ಅವನ ಆತ್ಮವಿಶ್ವಾಸ, ಸಾಧನೆಯ ಹಾದಿಯಲ್ಲಿ ಅವನಿಗಾದ ಅವಮಾನಗಳು, ಸೋತಾಗ ಅವನಿಟ್ಟ ಕಣ್ಣೀರು, ಇತರರು ಅವಮಾನಿಸಿದಾಗ ಅವನ ಮನಸ್ಸಿಗಾದ ನೋವು ಇದ್ಯಾವುದೂ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ.
ದೂರದಿಂದ ನೋಡಿದಾಗ ಎಲ್ಲವೂ ಸುಲಭವಾಗಿಯೇ ಕಾಣುತ್ತದೆ, ಆದರೆ ಹತ್ತಿರ ಹೋದಾಗ ಮಾತ್ರ ವಾಸ್ತವ ಅರಿವಾಗುತ್ತದೆ ಎಂಬ ಮಾತಿನಂತೆ ನಮಗೆ ದೂರದಿಂದ ಒಬ್ಬ ಸಾಧಕನನ್ನು ನೋಡಿದಾಗ ಅವನು ಜೀವನದಲ್ಲಿ ಎಷ್ಟು ಬೇಗ, ಎಷ್ಟು ಸುಲಭವಾಗಿ ಮೇಲೆ ಬಂದ ಎಂದೆನಿಸುತ್ತದೆ. ಆದರೆ ಸ್ವತಃ ನಾವೇ ಆ ಸಾಧನೆಯ ಹಾದಿಯಲ್ಲಿ ನಡೆದಾಗ ಮಾತ್ರ ಆ ಸಾಧನೆಯ ಹಾದಿಯಲ್ಲಿನ ಸೋಲುಗಳು, ಅವಮಾನಗಳು, ನೋವುಗಳು ಎಲ್ಲವೂ ನಮಗೆ ಅರಿವಾಗುತ್ತದೆ.
“ಜೀವನದಲ್ಲಿ ಸಾಧಿಸುವುದು ಸುಲಭವಲ್ಲ ನಿಜ, ಆದರೆ ಕಠಿಣ ಪರಿಶ್ರಮ, ಸಾಧಿಸುವ ಛಲ, ಗೆದ್ದೇ ಗೆಲ್ಲುವೆ ಎನ್ನುವ ಆತ್ಮವಿಶ್ವಾಸವಿದ್ದರೆ ಯಾವುದೂ ಕಷ್ಟವಲ್ಲ…”
✍️ಉಲ್ಲಾಸ್ ಕಜ್ಜೋಡಿ
- Friday
- November 1st, 2024