
ಅಮರ ಸುಳ್ಯ ಅಧ್ಯಯನ ಕೇಂದ್ರ ಅಸ್ತಿತ್ವಕ್ಕೆ ಇದುವರೆಗೆ ಡಾ. ಬ್ರಹ್ಮಾನಂದ ಅರ್ಥಶಾಸ್ತ್ರ ಸಂಶೋಧನಾ ಕೇಂದ್ರವಾಗಿದ್ದ ಕಾಂತಮಂಗಲದಲ್ಲಿರುವ ಡಾ. ಪ್ರಭಾಕರ ಶಿಶಿಲರ ಖಾಸಗಿ ಗ್ರಂಥಾಲಯವು ಅಮರ ಸುಳ್ಯ ಅಧ್ಯಯನ ಕೇಂದ್ರವಾಗಿ ಪರಿವರ್ತನೆ ಹೊಂದಿದೆ.
ಸೇವಾ ನಿವೃತ್ತಿಯ ಬಳಿಕ ತಾಂತ್ರಿಕವಾಗಿ ಯಾರೂ ಸಂಶೋಧನಾ ಮಾರ್ಗದರ್ಶಕರಾಗುವಂತಿಲ್ಲ. ಸೇವಾವಧಿಯಲ್ಲಿ ನಾಲ್ಕು ಡಾಕ್ಟರೇಟ್ ಮತ್ತು ಏಳು ಎಂ.ಫಿಲ್ಲ್ ಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ಮಾಡಿದ್ದೇನೆ. ಇನ್ನು ಮುಂದೆ ಗ್ರಂಥಾಲಯವನ್ನು ಕೇವಲ ಅಧ್ಯಯನಕ್ಕಾಗಿ ಮೀಸಲಾಗಿರಿಸಿದ್ದೇನೆ ಎಂದು ಡಾ. ಶಿಶಿಲರು ಹೇಳಿದ್ದಾರೆ.
ಸುಳ್ಯ ತಾಲೂಕಲ್ಲಿ 1837ರ ರೈತ ಬಂಡಾಯದ ಸ್ಮಾರಕ ನಿರ್ಮಾಣಕ್ಕಾಗಿ ಸಂಪಾಜೆ ದೇವಿ ಪ್ರಸಾದರ, ಮತ್ತಿತರರೊಡನೆ ಸೇರಿ ನಿರಂತರ ಹೋರಾಟ ಮಾಡುತ್ತಾ ಬಂದಿರುವ ಶಿಶಿಲರು 1998ರಿಂದ ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಅಮರ ಕ್ರಾಂತಿ ಸ್ಮಾರಕ ನಿರ್ಮಾಣವಾಗಬೇಕೆಂದು ಶಕ್ತಿಮೀರಿ ಯತ್ನಿಸಿದ್ದರು. 2022ರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣಾ ಕಾಲದ ಆದಿಯಲ್ಲಿ ಬೆಳ್ಳಾರೆಯಲ್ಲಿ ನಡೆದ ಬೆಳ್ಳಾರೆ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಅಂಗಾರ, ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ 2023ರ ಮಾರ್ಚ್ 30ರೊಳಗೆ ಬಂಗ್ಲೆಗುಡ್ಡೆಯಲ್ಲಿ ರೈತ ಬಂಡಾಯಗಾರರ ನೆನಪಿಗೆ ಸ್ವಾತಂತ್ರ್ಯ ಸೌಧ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆ ಬಗ್ಗೆ ಯಾವುದೇ ಕಾರ್ಯ ಆರಂಭವಾಗದ ಕಾರಣ ಮನ ನೊಂದು ತನ್ನ ಗ್ರಂಥಾಲಯವನ್ನೇ ಶಿಶಿಲರು ಅಮರ ಕ್ರಾಂತಿ ಸ್ಮಾರಕವಾಗಿಸಿದ್ದಾರೆ.
ಶಿಶಿಲರು ಈಗಾಗಲೇ ಅಮರ ಸುಳ್ಯ ಕ್ರಾಂತಿಯ ಬಗ್ಗೆ ಒಂದು ಕಾದಂಬರಿ, ಎರಡು ಸಂಶೋಧನಾ ಗ್ರಂಥ ಮತ್ತು ಒಂದು ನಾಟಕ ರಚಿಸಿದ್ದಾರೆ. ಅವರ ಗರಡಿಯಲ್ಲಿ ಡಾ. ಪ್ರತಿಮಾ ಜಯರಾಂ ಈ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿ ಹಂಪಿ ವಿ.ವಿ.ಯಿಂದ ಡಾಕ್ಟರೇಟ್ ಪಡೆದಿದ್ದಾರೆ. ಶಿಶಿಲರು ಬರೆದು ಜೀವನರಾಂ ನಿರ್ದೇಶಿಸಿದ ಅಮರ ಸುಳ್ಯ ಕ್ರಾಂತಿ 1837 ನಾಟಕಕ್ಕೆ ರಾಜ್ಯಮಟ್ಟದ ಐತಿಹಾಸಿಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಲಭ್ಯವಾಗಿದ್ದು, ಅದು ಕೃತಿ ರೂಪದಲ್ಲಿ ಸದ್ಯದಲ್ಲೇ ಹೊರಬರಲಿದೆ ಎಂದು ಶಿಶಿಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.