ಬಹುದಿನಗಳ ಬೇಡಿಕೆಯಾಗಿದ್ದ ಅರಂತೋಡು – ಅಡ್ತಲೆ– ಎಲಿಮಲೆ ರಸ್ತೆ ಕಾಮಗಾರಿಗೆ ಜ.8 ರಂದು ಸಚಿವ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿ ಮಾತಮಾಡಿದರು. ಈ ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ರೂ ಅನುದಾನ ಇರಿಸಲಾಗಿದೆ. ಗುದ್ದಲಿಪೂಜೆ ನಡೆದ ಇಂದಿನಿಂದ ಮುಂದಿನ 1 ವಾರದೊಳಗೆ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು. ಮಾರ್ಚ್ ತಿಂಗಳೊಳಗೆ ಇರಿಸಲಾಗಿರುವ ಅನುದಾನದ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ ಎಂದು ಹೇಳಿದ ಅವರು ಬಿಜೆಪಿ ಸರಕಾರ ಬಂದ ಬಳಿಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ.ಎಂದರು ಸುಳ್ಯದ ಇನ್ನೊಂದು ಬಹು ಬೇಡಿಕೆಯ 110 ಕೆ.ವಿ. ಕಾಮಗಾರಿಯೂ ಬಹು ಕಾಲದ ಬೇಡಿಕೆ.ಅದಕ್ಕಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿ ಜ.10 ರಂದು ಶಿಲಾನ್ಯಾಸ ನಡೆಯಲಿದೆ ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಈ ರಸ್ತೆ ಅಭಿವೃದ್ಧಿಗೆ ಸಚಿವ ಅಂಗಾರರು ೩ ಕೋಟಿ ಅನುದಾನ ಇರಿಸಿದ್ದಾರೆ. ಆದರೂ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಕೆಲವರು ಮತದಾನ ಬಹಿಷ್ಕಾರ, ಪ್ರತಿಭಟನೆ ಘೋಷಣೆ ಮಾಡಿದರು. ಅದಕ್ಕೆ ನಾವು ಹೆದರುವುದಿಲ್ಲ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಉತ್ತಮ ರೀತಿಯಲ್ಲಿ ಕೆಲ
ಮಾಡುತ್ತಿದೆ. ಅಭಿವೃದ್ಧಿಗೆ ಆದ್ಯತೆ ನೀಡಿರುವುದರಿಂದ ನಮ್ಮ ತಾಲೂಕಿನ ರಸ್ತೆಗಳು ಅಭಿವೃದ್ಧಿಗೊಂಡಿವೆ ಎಂದು ಹೇಳಿದರು. ಅರಂತೋಡು ಗ್ರಾ.ಪಂ. ಸದಸ್ಯ ಕೇಶವ ಅಡ್ತಲೆ ಮಾತನಾಡಿ ಅಂಗಾರರು ಶಾಸಕರಾದ ಬಳಿಕ ಈ ರಸ್ತೆ ಡಾಮರು ಕಂಡದ್ದು. ಬಳಿಕ ಎರಡು ಬಾರಿ ಡಾಮರೀಕರಣ ಆಗಿದೆ. ಇದೀಗ ಮತ್ತೆ ಅನುದಾನ ಇರಿಸಿ ರಸ್ತೆ ಅಭಿವೃದ್ಧಿ ಆಗುತ್ತದೆ. ಈ ನಡುವೆ ಮತದಾನ ಬಹಿಷ್ಕಾರ ಪ್ರತಿಭಟನೆ ಮಾತು ಕೇಳಿ ಬಂದಿತ್ತು. ಆದರೆ ನಮ್ಮ ಶಾಸಕರು ಹೇಳಿದಂತೆ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಮುಂದಿನ ದಿನದಲ್ಲಿ ಈ ರಸ್ತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ ಎಂದವರು ಹೇಳಿದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ, ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಗುಂಡಿ, ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾ.ಪಂ.ಸದಸ್ಯ ಶಿವಾನಂದ ಕುಕ್ಕುಂಬಳ ಮೊದಲಾದವರಿದ್ದರು.