ಪ್ರಕೃತಿಯ ಮಡಿಲಲ್ಲಿ ದೈವ ದೇವರನ್ನು ಕಂಡವರು ತುಳುವರು. ಪ್ರಕೃತಿಗೂ ದೈವರಾಧನೆಗೂ ಅವಿನಾಭಾವ ಸಂಬಂಧವಿದೆ. ದೈವರಾಧನೆ ಎಂದರೆ ಪ್ರಕೃತಿಯ ಆರಾಧನೆ ಎಂಬುವುದು ಅಕ್ಷರಶಃ ಸತ್ಯ. ಹಿಂದಿನ ಕಾಲದಲ್ಲಿ ಯಾವುದೆ ರೀತಿಯ ಉತ್ತಮ ವಿದ್ಯಾಭ್ಯಾಸ ಇಲ್ಲದ , ವೇದ ಶಾಸ್ತ್ರ ತಿಳಿಯದ ತುಳುನಾಡಿನ ಮೂಲ ನಿವಾಸಿಗಳು ತಾವು ನಂಬಿರುವ ಶಕ್ತಿಗಳನ್ನು ಪ್ರಾಕೃತಿಕವಾಗಿ ಆವರಿಸಿಕೊಂಡಿರುವ ಬನದಲ್ಲಿ ಒಂದು ಕಲ್ಲು ಹಾಕಿ ಆರಾಧಿಸುತ್ತಿದ್ದರು. ತುಳುನಾಡಿನ ಮಣ್ಣಿನಲ್ಲಿ ಸತ್ಯ- ಧರ್ಮ , ನ್ಯಾಯ – ನೀತಿಯನ್ನು ಕಂಡವರು ತುಳುವರು. ಕಾಟ್ ಕಲ್ಲು, ಕಾಡಿನ ಕೇಪುಲ ಹೂ( ಗುಡ್ಡೆತ ಕೇಪುಲ ಹೂ ) , ತೋಡಿನ ನೀರು ( ಹರಿಯುವ ತೋಡಿನ ನೀರು ಪರಿಶುದ್ಧವಾಗಿರುತ್ತದೆ ಎಂಬ ನಂಬಿಕೆ) ಬಳಸಿ ದೈವಗಳನ್ನು ಆರಾಧಿಸಿದರು .
ದೈವಕ್ಕೆ ಏನು ಬೇಕು ಎಂದು ಕೇಳಿದಾಗ ..ನನಗೆ ಗುಡ್ಡೆತ ಕೇಪುಲು, ತೋಟದ ಪಾಲೆ, ತೋಡ ನೀರ್ ಇದ್ದರೆ ಸಾಕು ಎಂಬುವುದು ಪ್ರತೀತಿ. ದೈವರಾಧನೆಯಲ್ಲಿ ಕೇಪುಲ ಹೂ, ತೋಟದ ಪಾಲೆ , ತೆಂಗಿನ ಮರದ ಸಿರಿ, ಮಾವಿನ ಮರದ ಎಲೆ, ಅಶ್ವತ ಮರದ ಎಲೆ ( ಪ್ರಸಾದಕ್ಕಾಗಿ) , ಬಾಳೆಗಿಡ ಉಪಯೋಗಿಸುವುದು ಹಿಂದಿನಿಂದಲೂ ಬಂದ ರೂಢಿ. ಅಂದರೆ ದೈವರಾಧನೆ ಎಂಬುವುದು ಅತ್ಯಂತ ಸರಳ ರೀತಿಯ ಆಚರಣೆ. ದೈವಕ್ಕೆ ಬಳಸುವ ಅಣಿ , ಜಕ್ಕೆಲ್ ಅಣಿ ಕೂಡ ಹಾಲೆಯಿಂದಲೇ ಮಾಡಲಾಗುತ್ತಿತ್ತು. ದೈವದ ಆರಾಧನೆಯಲ್ಲಿ ಪ್ರಾದೇಶಿಕವಾಗಿ ಭಿನ್ನತೆ ಇದ್ದರೂ , ಉಪಯೋಗಿಸುವ ಪರಿಕರಗಳು ಮಾತ್ರ ಪ್ರಕೃತಿ ದತ್ತವಾಗಿದೆ. ದೈವಗಳ ಮಾಗ ( ಮುಖವಾಡ) ಕೂಡ ಹಾಲೆಯಿಂದಲೇ ಮಾಡುತ್ತಿದ್ದರು. ಈಗ ಕಾಲ ಬದಲಾದ ಹಾಗೆ ಆಚರಣೆಯು ಬದಲಾಗಿದೆ…!!!
ದೈವರಾಧನೆಯು ತುಳುನಾಡಿನ ಸಂಪೂರ್ಣವಾದ ಅವೈದಿಕ ಆರಾಧನೆಯಾಗಿದೆ. ಆರಾಧನೆಗೊಸ್ಕರನೆ ಪ್ರಕೃತಿ ನಿರ್ಮಿಸಿಕೊಟ್ಟ ನಾಗ ಬನ ,ದೈವಗಳ ಬನಗಳು ಇಂದು ಕಾಂಕ್ರೀಟೀಕರಣವಾಗುತ್ತಿದೆ….!! ಹಿಂದಿನ ಕಾಲದಲ್ಲಿ ಅಂಗಡಿಯಿಂದ ಹೂ ,ಹಣ್ಣು ಹಂಪಲುಗಳನ್ನು ತರದೆ ತಮ್ಮ ಪ್ರಕೃತಿಯಲ್ಲಿ ಏನು ಸಿಗುತ್ತೊ ಅಂತಹ ವಸ್ತುಗಳನ್ನು ಉಪಯೋಗಿಸಿ ದೈವಗಳ ಆರಾಧನೆ ಮಾಡುತ್ತಿದ್ದರು. ದೇವರಿಗೆ ದೇವಸ್ಥಾನ ದೈವಗಳಿಗೆ ದೈವಸ್ಥಾನ ಎಂದು ನಂಬಿದವರು.ದೇವರಿಗೆ ಪೂಜೆ ದೈವಗಳಿಗೆ ತಂಬಿಲ ಕೊಟ್ಟು ಆರಾಧನೆ ಮಾಡಿದರು. ದೇವರಿಗೆ ರಥೋತ್ಸವ ದೈವಗಳಿಗೆ ಬಂಡಿ ಉತ್ಸವ ಮಾಡಿದರು.
ದೈವರಾಧನೆಯ ವಿಶೇಷತೆ ಏನೆಂದರೆ. ಇದು ಶುದ್ಧ ಜನಪದ ಆಚರಣೆ ಆಗಿದ್ದು, ಸಾವಿರಗಟ್ಟಲೆ ಖರ್ಚು ಮಾಡದೆ ಪ್ರಕೃತಿಯಿಂದ ಸಿಗುವ ವಸ್ತುಗಳಿಂದ ಅತ್ಯಂತ ಸರಳವಾಗಿ ಆಚರಿಸುವ ಆರಾಧನ ಶಕ್ತಿಯಾಗಿದೆ.
✍ಭಾಸ್ಕರ ಜೋಗಿಬೆಟ್ಟು