ಕನಸಿನಲ್ಲಿ ಕಂಡ ಗುರಿಯ ಸೇರುವುದು ಸುಲಭವೆಂದು ಅನಿಸಿತು ಅಂದು,
ಗುರಿಯ ಕಡೆಗಿನ ದಾರಿಯಲ್ಲಿ ಸಾಗಿದಾಗಲೇ ತಿಳಿಯಿತು ಗುರಿ ತಲುಪುವುದು ಎಷ್ಟು ಕಷ್ಟವೆಂದು…
ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡುವುದು ಸುಲಭವೆಂದು ಅನಿಸಿತು ಅಂದು,
ಹೆಜ್ಜೆಯಿಟ್ಟಾಗಲೇ ತಿಳಿಯಿತು ಪ್ರತೀ ಹೆಜ್ಜೆಯಲ್ಲೂ ಎಷ್ಟೊಂದು ಪರೀಕ್ಷೆಗಳಿವೆಯೆಂದು…
ಎಲ್ಲರೂ ನಮ್ಮವರು ಎಂದು ಅಂದುಕೊಂಡಿದ್ದೆವು ಅಂದು,
ಸೋತು ನಿಂತಾಗಲೇ ತಿಳಿಯಿತು ನಮ್ಮವರು ಯಾರೆಂದು, ಯಾರು ಸೋಲಿನಲ್ಲೂ ನಮ್ಮೊಂದಿಗೆ ನಿಲ್ಲುವರೆಂದು…
ಬದುಕು ಕನಸು ಕಂಡಷ್ಟೇ ಸುಲಭವೆಂದು ಅಂದುಕೊಂಡಿದ್ದೆವು ಅಂದು,
ಬದುಕು ಕನಸಲ್ಲ, ವಾಸ್ತವ ಕನಸಿನಂತಿರುವುದಿಲ್ಲ ಎಂದು ಅರಿತುಕೊಂಡೆವು ಇಂದು…
ಬದುಕು ಎಷ್ಟು ಬದಲಾಗಿದೆ ಎಂದು ನೋಡಿದಾಗಲೇ ತಿಳಿಯಿತು ಕನಸಿಗೂ ವಾಸ್ತವಕ್ಕೂ ಎಷ್ಟೊಂದು ವ್ಯತ್ಯಾಸವಿದೆಯೆಂದು, ಬದಲಾವಣೆ ಜಗದ ನಿಯಮವೆಂದು…
ಹೆಜ್ಜೆ ಹೆಜ್ಜೆಗೂ ಕಲ್ಲುಗಳಿವೆಯೆಂದು ನೋಡಿಕೊಂಡು ನಡೆಯುತ್ತಿದ್ದೆವು ಅಂದು,
ಎಡವಿದಾಗಲೇ ತಿಳಿಯುವುದು ಇಂದು ಅಲ್ಲಿ ಕಲ್ಲುಗಳಿವೆ ಎಂದು. ಏಕೆಂದರೆ ಇದು ಬದುಕಿನ ಹಾದಿ, ಮುಂದೇನಾಗುವುದೋ ಅರಿಯಲಾಗದ ಹಾದಿ, ನೋವು ನಲಿವನ್ನು ಅನುಭವಿಸಿ ಮುನ್ನಡೆಯುವ ಹಾದಿ…
✍️ಉಲ್ಲಾಸ್ ಕಜ್ಜೋಡಿ