ಎಲ್ಲಾ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. “ಕನ್ನಡವು ಕೇವಲ ಘೋಷ ವಾಕ್ಯಗಳಿಗೆ ಸೀಮಿತವಾಗಿರಬಾರದು” ಕನ್ನಡದ ಬಗ್ಗೆ ಮಾತಾಡುವಾಗ ನಾವೆಷ್ಟು ಕನ್ನಡದ ಬಗೆಗೆ ಅಭಿಮಾನವನ್ನು ಹಾಗೂ ಪರಂಪರೆಯನ್ನು ಇಂದಿನ ವಿದ್ಯಾಮಾನದಲ್ಲಿ ಉಳಿಸಿಕೊಂಡಿದ್ದೇವೆ ಎಂಬುದನ್ನು ತುಲನೆ ಮಾಡಬೇಕಿದೆ. ಅದರಲ್ಲೂ ಮೊದಲು ಒಂದು ಭಾಷೆ ಬೆಳೆಯಬೇಕಾದರೆ ಆ ಭಾಷೆಯ, ಅದರ ಸಾಹಿತ್ಯದ ವಿವಿಧ ಮಜಲುಗಳನ್ನು ಕುರಿತಾದ ಚಿಂತನೆಗಳನ್ನು ಮಾಡಬೇಕಾದ್ದು ಅವಶ್ಯಕ. ಭಾಷೆಯ ಮೇಲಿನ ಹಿಡಿತವನ್ನು ಅರಿತುಕೊಳ್ಳಬೇಕಾಗಿದೆ. ಭಾಷೆ ಅಂದರೆ ನಾವು ದಿನ ನಿತ್ಯ ಮಾತನಾಡುವ ಪದಗಳ ಬಳಕೆಯನ್ನು ಭಾಷೆಯೆಂದು ಹೇಳಬಹುದು. ಇದರಿಂದ ಭಾಷೆಯ “ಶ್ರೀಮಂತಿಕೆ” ಹೆಚ್ಚುತ್ತದೆ.
ನಾವೇಕೆ ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ಕರೆದೊಯ್ಯ ಬಾರದು..! ಮಾತಾಡುವಾಗ ಕನ್ನಡ ಪದ ಬಳಕೆ ಹೆಚ್ಚಾಗಿ ಬಳಸಬೇಕು .ಇದರಿಂದ ಕನ್ನಡದ ಬಗೆಗಿನ ಸೊಗಡು ಹೆಚ್ಚುತ್ತದೆ.
ಕೇವಲ ನಾವು ಇಂದು ಆಂಗ್ಲ ಭಾಷೆಯನ್ನು ಕಲಿತ ಮಾತ್ರಕ್ಕೆ ಕನ್ನಡದ ಸೊಗಡನ್ನು ಮರೆಯಬಾರದು. ಆಂಗ್ಲ ಭಾಷೆಗೆ ಇಂದಿನ ಯುವ ಜನತೆಯು ಮಾರು ಹೋಗಿ ಕನ್ನಡದ ಮೇಲಿನ ಅಭಿಮಾನ ಕುಂಠಿತಗೊಳ್ಳುತ್ತಿದೆ. ಇದಕ್ಕಾಗಿ ನಾವು ಕನ್ನಡವನ್ನು ಅವಿಚ್ಛಿನ್ನಗೊಳಿಸಲು ಗಲ್ಲಿ ಗಲ್ಲಿಯೂ ಕನ್ನಡದ ಕಂಪು ಸೂಸುವಂತೆ ಮಾಡಬೇಕು.
ನಮ್ಮ ನಾಡು ಸಂಸ್ಕೃತಿಯ ಬಗೆಗೆ ನಮ್ಮಲ್ಲಿ ಹೆಮ್ಮೆ ಗೌರವದ ಮನೋಭಾವನೆಯನ್ನು ಎಲ್ಲರಲ್ಲೂ ಬೆಳಸುವಂತೆ ಮಾಡಬೇಕು
ಕಲಿಕಾ ಕ್ಷೇತ್ರದಲ್ಲೂ ಒಂದನೇ ತರಗತಯಿಂದ ಕಲಿಕಾ ಮಾಧ್ಯಮವಾಗಿ ಇಂಗ್ಲೀಷ್ ಭಾಷೆಗೆ ಹೆಚ್ಚು ಒತ್ತು ನೀಡಿದರೆ..! ಕನ್ನಡವನ್ನು ಅಪ್ಪ – ಅಮ್ಮಂದಿರು ಮುಕ್ತ ಮನಸ್ಸಿನಿಂದ ಹೇಗೆ ಸ್ವಾಗತಿಸುವರು ಇಂದು…? ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದುವುದು ಇಂದಿನ ಆಧುನಿಕ ಯುಗದಲ್ಲಿ ಅನಿವಾರ್ಯ ವೆಂಬುದು ಕನ್ನಡದ ಪೋಷಕರು ಒಪ್ಪಿಕೊಳ್ಳಲಿಲ್ಲವೇ..?
“ಒಂದು ಎರಡು ಬಾಳೆಲೆ ಹರಡು” “ನಾಗರ ಹಾವೇ ಹಾವೊಳು ಹೂವೇ” “ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ ” “ಪುಟಾಣಿ ಕರು ಒಂದು ನಮ್ಮ ಮೇಲಿದೆ “ಎಂಬತ್ಯಾದಿ ಪದ್ಯಗಳನ್ನು ಕೇಳುವ ಮೊದಲೇ ಅವರ ಕಿವಿಯನ್ನು “”ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ” ಬಾ ಬಾ ಬ್ಲಾಕ್ ಶೀಪ್” “ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ” ಇಂತಹ ಪದ್ಯಗಳು ಅಪ್ಪಳಿಸಿರುತ್ತವೆ. ಪೋಷಕರು ತಾವು ಕಲಿತ ಕನ್ನಡ ಪದ್ಯವನ್ನು ತಮ್ಮ ಮಕ್ಕಳಿಗೆ ಇಂದು ತಿಳಿಯಪಡಿಸಬೇಕಾಗಿದೆ. ಭಾಷಿಕ ಭಾಷೆಯ ಕೌಶಲದ ಪ್ರಾಚೀನ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳಸುವ ಮಹೋನ್ನತ ಕಾರ್ಯವಾಗಬೇಕು.
ಅದೇನೇ ಇರಲಿ ಎಲ್ಲ ಕುಂದು ಕೊರೆತೆಗಳ ನಡುವಲ್ಲೂ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ನಡೆಯುತ್ತಲೇ ಇರುತ್ತದೆ. ಈ ಬಾರಿಯೂ ರಾಜ್ಯೋತ್ಸವವಾದರೂ ಕನ್ನಡದ ಅವಿಚ್ಛಿನ್ನ ಪರಂಪರೆಯನ್ನು ಉಳಿಸುವ ಕಾರ್ಯ ವಾಗಲಿ ಎಂಬುದು ನಮ್ಮ ಆಶಯ…
“ಸಿರಿ ಗನ್ನಡಂ ಗೆಲ್ಗೆ “ಸಿರಿ ಗನ್ನಡಂ ಬಾಳ್ಗೆ”
✍️ಕಿಶನ್ ಎಂ. ಪವಿತ್ರನಿಲಯ ಪೆರುವಾಜೆ