ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗ್ರಾಮ್ ಒನ್ ನಾಗರಿಕಾ ಸೇವಾ ಕೇಂದ್ರ ಅರಂತೋಡು ಇದರ ಆಶ್ರಯದಲ್ಲಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ನಡೆದ ಪತ್ರಕರ್ತರ ಆರೋಗ್ಯ ತಪಾಸಣೆ ಹಾಗೂ ಆಭಾ ಕಾರ್ಡ್ ನೋಂದಣಿ ಶಿಬಿರ ಸೆ.28 ರಂದು ನಡೆಯಿತು.
ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಡಾ. ನಂದಕುಮಾರ್ ಚಾಲನೆ ನೀಡಿ ಮಾತನಾಡಿ, ಒಂದು ದೇಶ ಒಂದು ಕಾರ್ಡ್ ಎನ್ನುವ ನಿಟ್ಟಿನಲ್ಲಿ ಸರಕಾರ ಆಭಾ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಿದೆ. ಇದನ್ನು ಎಲ್ಲರೂ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅವರು ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ಕ್ರಮದಿಂದ ಆಗುತ್ತಿರುವ ಬದಲಾವಣೆಯಿಂದಾಗಿ ಹೃದಯ ಸೇರಿದಂತೆ ಆರೋಗ್ಯವನ್ನು ಮೇಲೂ ಪರಿಣಾಮ ಬೀರುತ್ತಿರುತ್ತದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತೀ ವರುಷವೂ ತಪಾಸಣೆ ಮಾಡಿಕೊಳ್ಳುವುದು ಅತೀ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಗಂಗಾಧರ್ ಮಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ದುರ್ಗಾಕುಮಾರ್ ನಾಯರ್ ಕೆರೆ ಉಪಸ್ಥಿತರಿದ್ದರು.
ಅರಂತೋಡು ಗ್ರಾಮ್ ಒನ್ ಸೇವಾ ಕೇಂದ್ರದ ಮುಖ್ಯಸ್ಥರಾದ ಮಂಜುನಾಥ್ ಪೈ ಅರಂಬೂರು ಆಭಾ ಕಾರ್ಡ್ ನೋಂದಣಿ ವ್ಯವಸ್ಥೆ ನೋಡಿಕೊಂಡರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ ಸ್ವಾಗತಿಸಿ, ಜಿಲ್ಲಾ ಸಂಘದ ಕಾರ್ಯದರ್ಶಿ ಗಂಗಾಧರ್ ಕಲ್ಲಪಳ್ಳಿ ವಂದಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.