ಕಳೆದ 15 ವರ್ಷಗಳಿಂದ ತೊಡಕಾಗಿದ್ದ ಸುಳ್ಯದ ತ್ಯಾಜ್ಯ ವಿಲೇವಾರಿ ಘಟಕದ ಜಾಗದ ಸಮಸ್ಯೆಗೆ ಅಂತಿಮ ಪರಿಹಾರ ಲಭ್ಯವಾಗಲಿದೆ.
ಅಲೆಟ್ಟಿ ಗ್ರಾಮದ ಕಲ್ಚರ್ಪೆಯಲ್ಲಿ 2008ರಲ್ಲಿ ಸುಳ್ಯ ನಗರದ ಘನತ್ಯಾಜ್ಯ ಘಟಕಕ್ಕೆ 3.00ಎಕ್ರೆ ಸ್ಥಳವನ್ನು ಕಾದಿರಿಸಲಾಗಿತ್ತು. ಅಲ್ಲಿಂದ ಬಳಿಕ ಕಲ್ಚರ್ಪೆ ತ್ಯಾಜ್ಯ ವಿಲೇವಾರಿ ಘಟಕವು ಅನೇಕ ಕಾರಣಗಳಿಂದ ವಿವಾದಗ್ರಸ್ತವಾಗಿತ್ತು. ಮೊದಲಿಗೆ ಹತ್ತಿರದ ನಿವಾಸಿಗಳು ಹಾಗೂ ಪೆರಾಜೆ ಗ್ರಾಮ ಪಂಚಾಯತ್ ನ ನಿವಾಸಿಗಳು ಕಲ್ಚರ್ಪೆಯಲ್ಲಿ ಕಸ ಹಾಕುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯಕ್ಕೂ ಕೂಡ ಹೋಗಿದ್ದರು. ಜೊತೆಗೆ ಈ ಜಾಗದ ಕುರಿತು ಅರಣ್ಯ ಇಲಾಖೆಯು ತಕರಾರರು ಎತ್ತಿದ್ದು ನಗರ ಪಂಚಾಯತ್ ಗೆ ಕೇವಲ ಒಂದು ಎಕರೆಯಷ್ಟು ಸ್ಥಳವು ಮಾತ್ರ ವಶದಲ್ಲಿದ್ದು ಕಸವನ್ನು ಡಂಪ್ ಮಾಡಿದ ಕಾರಣದಿಂದಾಗಿ ಸ್ಥಳೀಯ ನಿವಾಸಿಗಳ ಪ್ರತಿಭಟನೆಯಿಂದಾಗಿ ನಗರ ಪಂಚಾಯತ್ ನ ಕಸವಿಲೆವಾರಿಗೆ ಸ್ಥಳವೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು ಈ ಸಂದರ್ಭದಲ್ಲಿ ಅನಿವಾರ್ಯವಾಗಿ 2016 ರಿಂದ ನಗರ ಪಂಚಾಯತಿನ ಆವರಣದಲ್ಲಿಯೇ ಶೆಡ್ ಅನ್ನು ನಿರ್ಮಿಸಿ ಒಣಕಸವನ್ನು ಸಂಗ್ರಹಿಸುವ ಕೆಲಸವನ್ನು ಆರಂಭಿಸಲಾಗಿತ್ತು. ನಗರ ಪಂಚಾಯತ್ ನ ಎದುರುಗಡೆ ಕಸವನ್ನು ಸಂಗ್ರಹಿಸಿರುವ ಕುರಿತು ಸಾರ್ವಜನಿಕರಿಂದ ಹಲವಾರು ಟೀಕೆಗಳು ವ್ಯಕ್ತವಾಗಿತ್ತು. ನಿವೇಶನದ ಕೊರತೆಯಿಂದಾಗಿ ನಗರ ಪಂಚಾಯತಿಗೆ ಪರ್ಯಾಯ ವ್ಯವಸ್ಥೆ ಹುಡುಕಲು ಸಾಧ್ಯವಾಗಿರಲಿಲ್ಲ.
ಇತ್ತೀಚೆಗೆ ಟೆಂಡರ್ ಮೂಲಕ ಶೆಡ್ ನಲ್ಲಿ ಸಂಗ್ರಹಿಸಲಾದ ಅರ್ಧದಷ್ಟು ಕಸವನ್ನು ಸಾಗಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಮಧ್ಯೆ ಕಲ್ಚರ್ಪೆ ಯಲ್ಲಿ ಗ್ಯಾಸಿಫಿಕೇಶನ್ ತಂತ್ರಜ್ಞಾನದ ಯಂತ್ರವನ್ನು ಅಳವಡಿಸಲಾಗಿದ್ದರೂ ಹೆಚ್ಚುವರಿ ಸ್ಥಳದ ಕೊರತೆಯಿಂದಾಗಿ ಇತರೆ ಯಂತ್ರೋಪಕರಣಗಳನ್ನು ಅಳವಡಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ವತಹ ಆಸಕ್ತಿ ವಹಿಸಿ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅರಣ್ಯ ಇಲಾಖೆಯ ಆಕ್ಷೇಪವನ್ನು ಪರಿಹರಿಸಲು ಮುತುವರ್ಜಿ ವಹಿಸಿದ್ದರು.
ನಗರ ಪಂಚಾಯತ್ ನ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ವಿಭಾಗಿಯ ಸಮಿತಿಯ ಮುಂದೆ ಬಂದಿದ್ದು ಇಂದು ನಡೆದ ಪರಿಶೀಲನ ಸಭೆಯಲ್ಲಿ ಸುಳ್ಯ ನಗರ ಪಂಚಾಯತ್ನ ಮನವಿಯನ್ನು ಪುರಸ್ಕರಿಸಿ ಪರಿಸರಕ್ಕೆ ಹಾನಿಯಾಗದಂತೆ ಯಂತ್ರೋಪಕರಣಗಳನ್ನು ಅಳವಡಿಸಿ ತ್ಯಾಜ್ಯ ನಿರ್ವಹಣೆಗೆ ಕೆಲವು ನಿಬಂಧನೆಗಳಿಗೆ ಒಳಪಟ್ಟು ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು ನೀಡಲು ಸಮ್ಮತಿ ನೀಡಿರುತ್ತಾರೆ.
ಇದರಿಂದಾಗಿ ಇದೀಗ ಸುಳ್ಯ ನಗರ ಪಂಚಾಯಿತಿಗೆ ತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟ ದೊಡ್ಡ ತೊಡಕೊಂದು ನಿವಾರಣೆಯಾದಂತಾಗಿದೆ. ಕಲ್ಚರ್ಪೆಯಲ್ಲಿ ಪೂರ್ಣ ಮೂರೂ ಎಕರೆ ಸ್ಥಳವನ್ನು ಬಳಸಿಕೊಂಡು ವ್ಯವಸ್ಥಿತವಾದಂತಹ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲು ನಗರ ಪಂಚಾಯಿತಿಗೆ ಅವಕಾಶ ಲಭಿಸಲಿದೆ. ಈ ದಿನ ಆನ್ಲೈನ್ ಮುಖಾಂತರ ನಡೆದಂತಹ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸತಹ ಭಾಗವಹಿಸಿ ಈ ಜಾಗವನ್ನು ನಗರ ಪಂಚಾಯಿತಿಗೆ ನೀಡಬೇಕಾದ ಅವಶ್ಯಕತೆಯನ್ನು ವಿಭಾಗಿಯ ಸಮಿತಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ನಗರ ಯೋಜನಾ ನಿರ್ದೇಶಕರಾದ ಅಭಿಷೇಕ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಮುಖ್ಯ ಅಧಿಕಾರಿ ಸುಧಾಕರ್ ರವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆನ್ಲೈನ್ ಸಭೆಯಲ್ಲಿ ಭಾಗವಹಿಸಿದ್ದರು.