ಇತ್ತೀಚೆಗೆ ಭೀಕರ ಪ್ರವಾಹದಿಂದಾಗಿ ಸುಳ್ಯ ಕ್ಷೇತ್ರದ ಕೆಲವೊಂದು ಭಾಗಗಳಲ್ಲಿ ವಿಪರೀತ ಸಮಸ್ಯೆಗಳಾಗಿದ್ದು, ಕೊಲ್ಲಮೊಗ್ರು ಗ್ರಾಮದ ಕಡಂಬಳ ಸೇತುವೆ ಕೂಡಾ ಕೊಚ್ಚಿ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಮಳೆಗಾಲದಲ್ಲಿ ತಕ್ಷಣ ಸೇತುವೆ ನಿರ್ಮಾಣ ಕಾರ್ಯ ಅಸಾಧ್ಯವಾದುದರಿಂದ ಅಲ್ಲಿ ಸ್ವಲ್ಪ ವಿಳಂಬವಾಗಿ ಮೋರಿ ಪೈಪು ಅಳವಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರಕಾರದ ಸಚಿವರಾದ ಎಸ್.ಅಂಗಾರರವರ ನೇತೃತ್ವದಲ್ಲಿ ಪಕ್ಕಾ ಸೇತುವೆ ನಿರ್ಮಾಣದ ಕಾರ್ಯ ನಡೆಯಲಿದೆ.
ಸುಳ್ಯ ತಾಲೂಕು ಕೊಲ್ಲಮೊಗ್ರು ಗ್ರಾಮದ ಕಡಂಬಳ ಸೇತುವೆ ರಚನೆಯ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ನಾಟಕ ಮಾಡುತ್ತಿದೆ. ಕಾಂಗ್ರೆಸ್‌ನವರು ತಮ್ಮ ಅಧಿಕಾರದ ಅವಧಿಯಲ್ಲಿ ಮತ್ತು ಅವರ ಜನಪ್ರತಿನಿಧಿಗಳು ಇರುವಾಗ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಿಲ್ಲ. ಈಗ ಬಿ.ಜೆ.ಪಿಯ ಅಧಿಕಾರದ ಅವಧಿಯಲ್ಲಿ ಕ್ಷೇತ್ರದಾದ್ಯಂತ ಶರವೇಗದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈ ಭಾಗದ ಜನರ ಎಲ್ಲಾ ಆಶೋತ್ತರಗಳು ಒಂದೊಂದಾಗಿ ಈಡೇರುತ್ತಿದೆ.
ಕಾಂಗ್ರೆಸ್‌ನ ನಂದಕುಮಾರ್ ಸುಳ್ಯ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಹೋಗುತ್ತಿದ್ದರೂ ಅಲ್ಲೆಲ್ಲೂ ಅವರಿಂದಾಗಿ ಅಭಿವೃದ್ಧಿಯಾಗುತ್ತಿರುವುದು ಕಂಡುಬಂದಿರುವುದಿಲ್ಲ. ಕಾಂಗ್ರೆಸ್‌ನವರು ಜನರನ್ನು ವಂಚಿಸುವ ಕೆಲಸವನ್ನಷ್ಟೆ ಮಾಡುತ್ತಿದ್ದಾರೆ. ಪ್ರಾಕೃತಿಕ ವಿಕೋಪ, ಕೊರೋನಾ ಮುಂತಾದ ಸಂಕಷ್ಟಗಳು ಎದುರಾದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ವಿಘ್ನ ಸಂತೋಷಿಗಳಂತೆ ವರ್ತಿಸುತ್ತಿದ್ದಾರೆ. ಅವರಿಗೆ ಬಿ.ಜೆ.ಪಿ.ಯ ವಿರುದ್ಧ ಮಾತಾಡಲು ಏನಾದರೂ ಕಾರಣ ಬೇಕಾಗಿದೆಯೇ ಹೊರತು ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಅಥವಾ ಊರಿನ ಅಭಿವೃದ್ಧಿ ಮಾಡುವುದು ಮುಖ್ಯವಾಗಿರುವುದಿಲ್ಲ. ಕೋವಿಡ್-19 ಸಂದರ್ಭದಲ್ಲಿ ಸರಕಾರ ವ್ಯಾಕ್ಸಿನ್ ಕೊಡುತ್ತಿರುವುದನ್ನು ಕಾಂಗ್ರೆಸ್‌ನವರು ಡಿಸ್ಟಿಲ್ಡ್ ವಾಟರ್ ಎಂದು ಅಪಪ್ರಚಾರ ಮಾಡಿ, ಕೊನೆಗೆ ಎಲ್ಲರಿಗಿಂತ ಮುಂಚಿತವಾಗಿ ಕಾಂಗ್ರೆಸ್ ನಾಯಕರು ಕೋವಿಡ್ ವ್ಯಾಕ್ಸಿನ್‌ಗಳನ್ನು ಪಡೆದುಕೊಂಡಿದ್ದಾರೆ. ಅವರಿಗೆ ಜನರ ಜೀವಕ್ಕಿಂತ ಬಿ.ಜೆ.ಪಿ.ಯನ್ನು ಟೀಕಿಸುವುದು ಮುಖ್ಯವಾಗಿತ್ತು.
ಕಾಂಗ್ರೆಸ್‌ನವರು ಮತಗಳನ್ನು ಪಡೆಯುವುದಕ್ಕೋಸ್ಕರ ಏನೇನು ನಾಟಕ ಮಾಡುತ್ತಿದ್ದಾರೆ ಎಂಬುದನ್ನು ನಮ್ಮ ಕ್ಷೇತ್ರದ ಪ್ರಜ್ಞಾವಂತ ಮತದಾರರು ಚೆನ್ನಾಗಿ ಅರಿತಿದ್ದಾರೆ ಎಂದು
ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ ಕಂಜಿಪಿಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024