Ad Widget

ಭಾರತದ ಶಿಖರಕ್ಕೇರಲಿದೆ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ, ಶ್ರೀ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರ ‘ರಿಕಾಲಿಂಗ್ ಅಮರ ಸುಳ್ಯ’ ದಾಖಲಾಧಾರಿತ ಕೃತಿಯು ಶೀಘ್ರದಲ್ಲೇ ಭಾರತ – ಚೀನಾ ಗಡಿಯ ಸಮೀಪದಲ್ಲಿರುವ ವಿಶ್ವದ ಅತಿ ಎತ್ತರದ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಉಮ್ಲಿಂಗ್ ಲಾ’ ಪಾಸ್ (ಸಮುದ್ರಮಟ್ಟದಿಂದ 19,300 ಅಡಿ) ಅನ್ನು ಪ್ರವೇಶಿಸಿಲಿದೆ ಎಂಬುದಾಗಿ ತಿಳಿದುಬಂದಿದೆ.
ಅಮರ ಸುಳ್ಯ ಕ್ರಾಂತಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಸ್ಕ್ರೂ ರೈಡರ್ಸ್’ ಎಂಬ ದ್ವಿಚಕ್ರ ಸವಾರರ ಅನುಭವಿ ತಂಡವೊಂದು ರ‍್ಯಾಲಿ ಹಮ್ಮಿಕೊಳ್ಳಲು ಆಯೋಜಿಸಿದೆ.
ಈ ರ‍್ಯಾಲಿಯ ನೇತೃತ್ವ ವಹಿಸಿಕೊಂಡಿರುವ ಸ್ಕ್ರೂ ರೈಡರ್ಸ್ ತಂಡದ ಶ್ರೀ ವಿನೀತ್ ಬಿ. ಶೆಟ್ಟಿ ಮುಲ್ಕಿ ಮೂಲದವರಾಗಿದ್ದು, ಅವರು ದ.ಕ. ಜಿಲ್ಲೆಯಿಂದ ಲಡಾಖ್ ವರೆಗೆ 5000 ಕಿಲೋಮೀಟರ್ ಅಷ್ಟು ಸೋಲೋ ಬೈಕ್ ಸವಾರಿಯ ಅನುಭವದೊಂದಿಗೆ ಮುಂಬೈನಿಂದ ಮೌಂಟ್ ಅಬು ಮೂಲಕ ಅಮೃತಸರೋವರದ ವರೆಗೆ 34 ಗಂಟೆಗಳ ಕಾಲ 5 ರಾಜ್ಯಗಳನ್ನೊಳಗೊಂಡ 1870 ಕಿ.ಮೀ. ನಷ್ಟು ಪ್ರಯಾಣದ ದಾಖಲೆಯನ್ನು ಹೊಂದಿದ್ದಾರೆ. ಇವರೊಂದಿಗೆ ಸ್ಕ್ರೂ ರೈಡರ್ಸ್ ತಂಡದ ಅನುಭವಿ ಸವಾರರಾದ ಶ್ರೀ ಅಭಿಷೇಕ್ ಶೆಟ್ಟಿ, ಶ್ರೀ ವಿನೀತ್ ಶೆಟ್ಟಿ, ಶ್ರೀ ಶಮೂನ್ ಎಂ., ಶ್ರೀ ದೀಪಕ್ ಕರ್ಕೇರ ಹಾಗೂ ಶ್ರೀ ರೋವಿಲ್ ಅಲ್ಮೈಡ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 17ನೇ ತಾರೀಕಿನಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಉರ್ವಾ ಸ್ಟೋರ್ ನಲ್ಲಿರುವ ತುಳು ಭವನದಿಂದ ಪ್ರಾರಂಭವಾಗಲಿರುವ ರ‍್ಯಾಲಿ, ಉಡುಪಿ ಮಾರ್ಗವಾಗಿ ಮುಂಬೈ ಅನಂತರ ಗುಜರಾತ್ – ರಾಜಸ್ಥಾನ – ಹರ್ಯಾಣ – ಪಂಜಾಬ್ (ವಿಶೇಷವಾಗಿ ಅಮೃತಸರ ಹಾಗೂ ಪಾಕಿಸ್ತಾನದೊಂದಿಗಿನ ವಾಘಾ ಗಡಿ) – ಶ್ರೀನಗರ – ಕಾರ್ಗಿಲ್ – ಲೇಹ್ – ‘ಖರ್ದುಂಗ್ ಲಾ ಪಾಸ್’ – ತುರ್ ತುಕ್ – ಪ್ಯಾಂಗಾಂಗ್ ಸರೋವರ – ಸರ್ಚು – ಮನಾಲಿ – ದೆಹಲಿ, ಹೀಗೆ ಹೈದರಾಬಾದ್ ಮಾರ್ಗವಾಗಿ ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಸಂಪೂರ್ಣಗೊಳ್ಳಲಿದೆ.
‘ರಿಕಾಲಿಂಗ್ ಅಮರ ಸುಳ್ಯ’ ಎಂಬ ಸರ್ಕಾರ ಪ್ರಕಟಿತ ದಾಖಲಾಧಾರಿತ ಇಂಗ್ಲಿಷ್ ಪುಸ್ತಕದಲ್ಲಿನ ತುಳುನಾಡಿನ ಮಣ್ಣಿನ ವೀರಗಾಥೆ ದೂರದೂರುಗಳಿಗೆ ಪರಿಚಯಿಸುವ ಧ್ಯೇಯ ರ‍್ಯಾಲಿ ಕೈಗೊಳ್ಳಲು ಪ್ರೇರೇಪಿಸಿತು ಎಂದು ಸ್ಕ್ರೂ ರೈಡರ್ಸ್ ತಂಡದ ಶ್ರೀ ವಿನೀತ್ ಬಿ. ಶೆಟ್ಟಿ ಅವರು ಹೇಳಿದ್ದಾರೆ.
ಹಿಂದಿನ ತಲೆಮಾರುಗಳು ಶಾಲೆಗೆ ಹೋಗುತ್ತಿರುವಾಗ ಪಠ್ಯಪುಸ್ತಕಗಳಲ್ಲಿ ಅಮರ ಸುಳ್ಯ ಕ್ರಾಂತಿಯ ಬಗ್ಗೆ ಉಲ್ಲೇಖವೇ ಇರದ ಸಂದರ್ಭದಿಂದ ಇಂದು ಸರ್ಕಾರಿ ಪ್ರಕಟಣೆಯ ಮೂಲಕ, ಬ್ರಿಟಿಷ್ ದಾಖಲೆಗಳೊಂದಿಗೆ ಒಂದು ಪುಸ್ತಕವೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೊರಬಂದಿರುವುದು ಪ್ರಗತಿಯ ಸಂಕೇತ. ಇಂಗ್ಲಿಷ್‌ನಲ್ಲಿರುವುದರಿಂದ ತುಳುನಾಡಿನ ಹೊರಗೆಯೂ ಓದಬಲ್ಲ ಈ ಪುಸ್ತಕದಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಈ ನೆಲದ ಕೊಡುಗೆಯ ಬಗ್ಗೆ ಭಾರತದ ಮೂಲೆ ಮೂಲೆಗೂ ಪಸರಿಸಲು ರ‍್ಯಾಲಿಯನ್ನು ಕೈಗೊಳ್ಳಲು ಸ್ಫೂರ್ತಿ ದೊರಕಿದೆ ಎಂದು ತಿಳಿಸಿದ್ದಾರೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!