ಸ್ವಾರ್ಥ ಬದುಕಿನೊಂದಿಗೆ ಬದುಕುತ್ತಿರುವ ಜನರು ಸಮಾಜಕ್ಕೆ ಒಂದಿಷ್ಟು ಅರ್ಪಣಾ ಮನೋಭಾವದೊಂದಿಗೆ ಕೊಡುಗೆ ನೀಡಿದರೆ ಆ ಊರು ಮತ್ತು ಗ್ರಾಮ ಮಾದರಿ ಗ್ರಾಮವಾಗಿ ಬೆಳೆಯುತ್ತದೆ. ಮತ್ತು ಆ ಊರು ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಸಂಪದ್ಭರಿತವಾಗಿ ಬೆಳೆಯುತ್ತದೆ. ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ.ರೇಣುಕಾ ಪ್ರಸಾದ್ ಕೆ.ವಿ ಯವರು ಅಭಿಪ್ರಾಯ ಪಟ್ಟರು. ಅವರು ಸೆ.10 ರಂದು ಐವರ್ನಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಮಾತಾಜಿ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿ ಮಾತನಾಡಿದರು.
ಸುಳ್ಯ ತಾಲೂಕು ಕೇಂದ್ರಕ್ಕೆ ಹತ್ತಿರವಿರುವ ಐವರ್ನಾಡಿನಂತಹ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕವಾಗಿ, ಊರಿನ ಜನರ ತೊಡಗಿಸಿಕೊಳ್ಳುವಿಕೆ ಅತ್ಯಂತ ಶ್ಲಾಘನೀಯ. ಈ ಊರಿನ ಹೆಚ್ಚಿನ ಜನರು ವಿದ್ಯಾವಂತರು ಮತ್ತು ಹೃದಯವಂತರು. ಇಲ್ಲಿನ ಅನೇಕ ಜನರು ನಮ್ಮ ಕೆ.ವಿ.ಜಿ.ಕ್ಯಾಂಪಸ್‌ನಲ್ಲಿ ಸೇವೆ ಸಲ್ಲಿಸುತಿದ್ದಾರೆ. ಈ ಗ್ರಾಮದಲ್ಲಿ ಅರ್ಪಣಾ ಮನೋಭಾವದ ಜನರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಇಲ್ಲಿನ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳು ಅತ್ಯಂತ ಅಭಿವೃದ್ದಿ ಹೊಂದುತ್ತಿವೆ. ಈ ರೀತಿಯ ಚಿಂತನೆಗಳು ಇನ್ನಷ್ಟು ಮುಂದುವರೆಯಲಿ ಮತ್ತು ಈ ಊರು ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದಿ ಮಾದರಿ ಗ್ರಾಮವಾಗಿ ಗುರುತಿಸುವಂತಾಗಲಿ ಎಂದು ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯರಾದ ಹರೀಶ್ ಕುಮಾರ್ ,ಮಾಜಿ ಸಚಿವರಾದ ಎಸ್.ರಮಾನಾಥ ರೈ, ಐರ್ವನಾಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್ ಮನ್ಮಥ, ನಿವೃತ್ತ ಮುಖ್ಯೋಪಾಧ್ಯಾಯರಾದ ವೀರಪ್ಪ ಗೌಡರು, ಭರತ್ ಮುಂಡೋಡಿ, ನ್ಯಾಯವಾದಿಗಳಾದ ಎಂ.ವೆಂಕಪ್ಪ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
- Thursday
- November 21st, 2024