ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಸೆ. 6 ರಂದು “ಆಧುನಿಕ ಜೀವನ ಶೈಲಿಯಲ್ಲಿ ಆಯುರ್ವೇದದ ಮಹತ್ವ” ವಿಷಯದ ಕುರಿತು ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಕೆವಿಜಿ ಆಯುರ್ವೇದ ಶಾಲಾಕ್ಯ ತಂತ್ರ ವಿಭಾಗ ಮತ್ತು ಆರೋಗ್ಯ ಭಾರತಿ ಕರ್ನಾಟಕ ದಕ್ಷಿಣ ಮಂಗಳೂರು ವಿಭಾಗ ದ.ಕ. ಇದರ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಅವರು ಮಾತನಾಡಿ ನಾವು ಅರೋಗ್ಯವಂತರಾಗಿ ಬಾಳಬೇಕಾದರೆ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಲ್ಲಿ ಕಾಳಜಿ ಹೊಂದಿರಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಕೆವಿಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇಲ್ಲಿನ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ ದೇಹಕ್ಕೆ ಹಿತಕರ ಆಹಾರ ಸೇವನೆಯ ಪ್ರಜ್ಞೆ ಇಂದು ಕಡಿಮೆಯಾಗುತ್ತಿದೆ. ಆಧುನಿಕ ಜೀವನ ಶೈಲಿಯಲ್ಲಿ ದೇಹ ಮತ್ತು ಮನಸ್ಸು ಸುಸ್ಥಿತಿಯಲ್ಲಿ ಇರಬೇಕಾದರೆ ಆಹಾರ ಶುದ್ಧಿ, ಸತ್ವ ಶುದ್ಧಿ ಬಹಳ ಮುಖ್ಯ. ನಮ್ಮ ಬುದ್ಧಿ ಶಕ್ತಿ ನೆನಪು ಶಕ್ತಿ ವೃದ್ಧಿಸಲು ನಾವು ಇಂದ್ರಿಯ ಮತ್ತು ಮನಸ್ಸಿನ ಸಾಮರ್ಥ್ಯವನ್ನು ಅರಿಯಬೇಕು ಎಂದರು. ಸತ್ವಯುತ ಆಹಾರಗಳ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ಮೊಬೈಲ್, ಕಂಪ್ಯೂಟರ್ ಅತಿಯಾದ ಅತೀ ಬಳಕೆ ಮಾಡುವುದರಿಂದ ಕಣ್ಣಿನ ನರ ಮಂಡಲಕ್ಕೆ ಉಂಟಾಗುವ ಅಪಾಯದ ಕುರಿತು ತಿಳಿಸಿದರು. ದೇಹ ಸಶಕ್ತವಾಗಲು ನಾವು ರೂಢಿಸಿಕೊಳ್ಳಬೇಕಾದ ಜೀವನ ವಿಧಾನ ವಿಧಾನಗಳನ್ನು ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು.
ಮುಖ್ಯ ಅತಿಥಿಯಾಗಿ ಆರೋಗ್ಯ ಭಾರತಿ ಪುತ್ತೂರು ಇದರ ಜಿಲ್ಲಾ ಕಾರ್ಯದರ್ಶಿ ಗಣೇಶ್ ಭಟ್ ಮೊವ್ವಾರು ಮಾತನಾಡಿ ವೈದ್ಯರು ತಿಳಿಸಿದ ಆರೋಗ್ಯ ಸೂತ್ರಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಆರೋಗ್ಯಕರ ಬದುಕಿಗೆ ಬೇಕಾದ ಆಹಾರ ಸೇವನೆ ರೂಢಿಸಿಕೊಳ್ಳಬೇಕು. ಮುಂದೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಹೋಮ್ ಸರ್ಜನ್ ಗಳಾದ ಡಾ. ನಮಿತಾ ಶೆಟ್ಟಿ, ಡಾ. ದಿವ್ಯ ಕಣ್ಣಿನ ಆರೋಗ್ಯ ಕ್ರೀಯಾಶೀಲವಾಗುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಶುಷ್ಕ ಕಣ್ಣಿನ ಅಪಾಯದ ಕುರಿತು ಈ ಸಂದರ್ಭದಲ್ಲಿ ಜಾಗೃತಿ ಮೂಡಿಸಲಾಯಿತು. ವೇದಿಕೆಯಲ್ಲಿ ಕೆವಿಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಶಾಲಾಕ್ಯ ವಿಭಾಗದ ಪ್ರಾಧ್ಯಾಪಕ ಡಾ. ಗೌರಿಶಂಕರ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ದಾಮೋದರ ಪಿ, ಸಾವಿತ್ರಿ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕೃತಿ ಜಿ ರಾವ್ ಮತ್ತು ಅಂಬಿಕಾ ಪ್ರಾರ್ಥಿಸಿದರು. ಉಪನ್ಯಾಸಕಿ ರೇಖಾ ಸ್ವಾಗತಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ ವಂದಿಸಿದರು.