ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಎಸ್ ಅಂಗಾರ ಅವರು ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಆಗಬೇಕು. ವಿದ್ಯುತ್ ಸಂಪರ್ಕ ಆಗಿಲ್ಲ ಎಂಬ ದೂರು ಬರಬಾರದು. ಅರ್ಜಿ ಬಂದಿಲ್ಲ ಎಂಬ ಸಬೂಬು ನೀಡದೇ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸರ್ವೆ ನಡೆಸಿ ವಿದ್ಯುತ್ ಸಂಪರ್ಕ ಆಗದ ಮನೆಗಳ ಮಾಹಿತಿ ನೀಡಬೇಕು. ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸುಳ್ಯ ಮೆಸ್ಕಾಂ ವಿಭಾಗಕ್ಕೆ ಸಂಬಂಧಿಸಿದಂತೆ 385ಅರ್ಜಿಗಳಲ್ಲಿ 381 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸುಬ್ರಹ್ಮಣ್ಯ ಉಪ ವಿಭಾಗದಲ್ಲಿ 166 ಮನೆಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಅರ್ಜಿ ಬಂದುದಕ್ಕೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳುತ್ತೀರಿ. ಸುಳ್ಯ ತಾಲೂಕಿನಲ್ಲಿ ಸರಿಯಾದ ರೀತಿಯಲ್ಲಿ ಸರ್ವೆ ನಡೆಸಬೇಕು. ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ಇಲಾಖೆಗೆ ಮಾಹಿತಿ ನೀಡಬೇಕು. ವಿದ್ಯುತ್ ಸಂಪರ್ಕ ಆಗಿಲ್ಲ ಎಂದು ಒಂದೇ ಒಂದು ದೂರು ಬರಬಾರದು. ಸರಕಾರ ಬೆಳಕು, ಭಾಗ್ಯ ಜ್ಯೋತಿಯಂತಹ ಯೋಜನೆಗಳನ್ನು ತಂದಿರುವಾಗ ಅದನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ವ್ಯವಸ್ಥೆ ಅಧಿಕಾರಿಗಳು ಮಾಡಬೇಕು” ಎಂದು ಸಚಿವರು ಹೇಳಿದರು.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಪರಂಬೋಕಿನಲ್ಲಿ ಕಟ್ಟಲಾದ ಕಟ್ಟಡಗಳ ಕುರಿತು ಪಾಲನಾ ವರದಿಯಲ್ಲಿ ಪ್ರಸ್ತಾಪವಾದಾಗ, “13 ಕಟ್ಟಡಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 3 ಅಕ್ರಮ ಕಟ್ಟಡಗಳಿಗೆ 2 ಪಟ್ಟು ದಂಡ ವಿಧಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿಗಳು ಹೇಳಿದಾಗ, “ದಂಡ ಹಾಕುತ್ತೀರಿ ಆಕ್ಷನ್ ಆಗುವುದಿಲ್ಲವಾದರೆ ನದಿ, ರಸ್ತೆ ಪರಂಬೊಬೇಕಿನಲ್ಲಿ ಎಲ್ಲರೂ ಕಟ್ಟಡ ಕಟ್ಟಿ ದಂಡ ಕಟ್ಟುತ್ತಾರೆ. ಏನಾದರೂ ಆಕ್ಷನ್ ಆಗಬೇಕಲ್ವ” ಎಂದು ಸಚಿವರು ಪ್ರಶ್ನಿಸಿದಾಗ, ಅಕ್ರಮವಾಗಿ ಕಟ್ಟಡ ಕಟ್ಟಿದ್ದಾರೆ. ಅದಕ್ಕೆ ಈಗ ದಂಡ ಹಾಕಲಾಗಿದೆ. ಆದರೆ ರಸ್ತೆ ಅಗಲೀಕರಣ ಸಂದರ್ಭ ಅದನ್ನು ತೆಗೆಯಕೆಂದು ಬಂದರೆ ಅದನ್ನು ತೆಗೆಯಬೇಕಾಗುತ್ತದೆ ಎಂದು ತಾ.ಪಂ. ಆಡಳಿತಾಧಿಕಾರಿ ಅಭಿಷೇಕ್ ಎ ಹೇಳಿದರು. ‘ಮತ್ತೊಮ್ಮೆ ದಾಖಲೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಿ” ಎಂದು ಸಚಿವರು ಸೂಚನೆ ನೀಡಿದರು.