ಕೆಲವು ದಿನಗಳ ಹಿಂದೆ ಮಳೆಯಿಂದಾಗಿ ಬಾರಿ ಹಾನಿ ಸಂಭವಿಸಿದ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳು ಶ್ರಮ ಸೇವೆಯಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕುಶಾಲಪ್ಪ ಜಾಲುಮನೆ ಅವರ ಕಾಲಿಗೆ ಮರ ಕೊಯ್ಯುವ ಮಿಷನ್ ತಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ ಮಾಸಾಶನದ ಮಂಜೂರಾತಿ ಪತ್ರವನ್ನು ಸೆ.08 ರಂದು ಅವರ ಮನೆಗೆ ತೆರಳಿ ವಿತರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್.ಪಿ ಅವರು ಕುಶಾಲಪ್ಪ ಜಾಲುಮನೆ ಅವರಿಗೆ ಮಾಸಾಶನ ಮಂಜೂರಾತಿ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ರಾಜೇಶ್.ಕೆ, ಕೊಲ್ಲಮೊಗ್ರ ಒಕ್ಕೂಟದ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳ ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ