ಸರ್ಕಾರದ ನಿರ್ದೇಶನದಂತೆ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಪ್ರಥಮ್ ಬುಕ್ಸ್ ಸಂಸ್ಥೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಸೆ.01 ರಿಂದ ಸೆ.10 ರವರೆಗೆ “ಒಂದು ದಿನ ಒಂದು ಕಥೆ” ಅಭಿಯಾನಕ್ಕೆ ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ.ಬಿ ಅವರು ಚಾಲನೆ ನೀಡಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಗ್ರಾಮ ಗ್ರಂಥಾಲಯದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಬೇಕು ಹಾಗೂ ಕಥೆಗಳನ್ನು ಓದುವ ಹವ್ಯಾಸವನ್ನು ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ವಟರ್ ಮತ್ತು ಸುಂದರಿ ಕಾಣೆಯಾಗಿದ್ದಾಳೆ ಎಂಬ ಎರಡು ಕಥೆಗಳನ್ನು ಭಾಗವಹಿಸಿದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳಿಗೆ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ ಮೋಟ್ನೂರು ಗಟ್ಟಿಯಾಗಿ ಓದಿ ಹೇಳಿದರು. ನಂತರ ಮಕ್ಕಳೆಲ್ಲರೂ ಆ ಎರಡು ಕಥೆಗಳನ್ನು ತಮ್ಮದೇ ರೀತಿಯಲ್ಲಿ ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶಿಕ್ಷಕರಾಗಿದ್ದ ಡಾ.ಎಸ್ ರಾಧಾಕೃಷ್ಣನ್ ಅವರ ನೆನಪಿಗಾಗಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರ ಕುರಿತು ಅನಿಸಿಕೆ ವ್ಯಕ್ತಪಡಿಸಿ ಗೌರವ ವಂದನೆ ಸಲ್ಲಿಸುತ್ತಾ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಂಥಾಲಯ ಸಮಿತಿಯ ಸದಸ್ಯರಾದ ಶ್ರೀಮತಿ ಮಿತ್ರ ಕುಮಾರಿ ಚಿಕ್ಮುಳಿ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಹಾಗೂ ಪೋಷಕರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ