ಚಿತ್ತ ಚಾಂಚಲ್ಯವನ್ನು ಹೋಗಲಾಡಿಸಲು ಯೋಗ ಪ್ರಧಾನ. ಪ್ರಾಚೀನ ಖುಷಿ ಮುನಿಗಳಿಂದ ಸಂಜಾತ ಯೋಗವು ಸರ್ವರೋಗ ನಿವಾರಕವಾಗಿದೆ. ಪತಂಜಲಿ ಮುನಿಯಿಂದ ಭಾರತದಲ್ಲಿ ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ.ವಿಶ್ವ ಇದನ್ನು ಅನುಸರಿಸುತ್ತಿದೆ.ದೇವತೆಯ ಆರಾಧನೆಗೆ ಯೋಗಾಸನವನ್ನು ಬಳಸಲಾಗುತ್ತದೆ. ಸೂರ್ಯನ ಪೂಜನೆಮಾಡುವ ಸೂರ್ಯ ನಮಸ್ಕಾರ ಅತ್ಯಂತ ಶ್ರೇಷ್ಠವಾದ ಆಸನವಾಗಿದೆ. ಯೋಗವು ಭಾರತವು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಇದೀಗ ವಿಶ್ವಾದ್ಯಂತ ಯೋಗದ ಕುರಿತು ತಿಳಿಯಲು ಹಾಗೂ ಆರೋಗ್ಯವಂತ ಪ್ರಪಂಚ ಸೃಷ್ಠಿಗೆ ವಿಶ್ವಯೋಗ ದಿನಾಚರಣೆ ಬುನಾದಿಯಾಗಲಿದೆ. ಸಮಚಿತ್ತ ಮತ್ತು ದೈಹಿಕ ಸಮತೋಲನಕ್ಕೆ ಯೋಗ ಅಸ್ತçವಾಗಿದೆ. ಏಕಾಗ್ರತೆಯೊಂದಿಗೆ ಮಾನಸಿಕ ಸದೃಢತೆ ಸಾಧಿಸಲು ಯೋಗ ಅಡಿಗಲ್ಲು.ಯೋಗದಿಂದ ರೋಗವಿಲ್ಲ. ಆದುದರಿಂದ ಎಳವೆಯಲ್ಲಿಯೇ ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಶ್ರಯದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ, ನೌಕರರ ವೃಂದ, ಎಸ್‌ಎಸ್‌ಪಿಯು ಕಾಲೇಜು ಸುಬ್ರಹ್ಮಣ್ಯ, ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯದ ಸಹಯೋಗದಲ್ಲಿ ಮಂಗಳವಾರ ನಡೆದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯೋಗಾಸನದಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ನಿರ್ಮಲ ಚಿತ್ತವು ರೂಪಿತವಾಗುತ್ತದೆ. ಇದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯ ದೃಢಗೊಳ್ಳುತ್ತದೆ ಎಂದರು.
ಚಿತ್ತಚಾಂಚಲ್ಯ ವಿಹೀನತೆಗೆ ಯೋಗ ಪ್ರಧಾನ:ಪ್ರಜ್ವಲ್.ಜೆ
ಭಾರತವು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ ಯೋಗ.ಇದೀಗಟ್ಜಗತಿಕವಾಗಿ ಸರ್ವರೂ ಯೋಗವನ್ನು ತಮ್ಮ ದಿನಚರಿಯನ್ನಾಗಿಸಿ ಆರೋಗ್ಯ ಸಮೃದ್ಧಿಯನ್ನು ಪಡೆಯುತ್ತಿದ್ದಾರೆ. ಸುಂದರವಾದ ಜೀವನ ನಡೆಸುವ ಮೂಲಕ ಆರೋಗ್ಯ ವೃದ್ಧಿಯಾಗಲು ಯೋಗ ಅಡಿಗಲ್ಲು.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾರತೀಯ ಪ್ರತಿನಿಧಿ ಸಭೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಸ್ತಾಪವನ್ನು ಇಡುತ್ತಾರೆ.ಆಗ ಜಗತ್ತಿನ ೧೭೭ ರಾಷ್ಟçಗಳು ಒಕ್ಕೊರಲಿನಿಂದ ಯೋಗ ದಿನಾಚರಣೆಯನ್ನು ಆಚರಿಸುತ್ತೇವೆ ಎಂದು ಒಕ್ಕೊರಲಿನಿಂದ ಮತದಾನ ಇಲ್ಲದೆ ಒಪ್ಪಿಕೊಳ್ಳುತ್ತದೆ.ಇದು ಇಂತಹ ಘಟನೆ ಜಾಗತಿಕ ಇತಿಹಾಸದಲ್ಲಿ ಮೊದಲನೆ ಭಾರಿ ನಡೆದುದು ಎನ್ನುವುದು ಹೆಮ್ಮೆಯೇ ಸರಿ. ಹಾಗಾಗಿ ಯೋಗವು ಇದೀಗ ಜಗತ್ತಿನಲ್ಲಿ ಭಾರತದ ಶಕ್ತಿಯನ್ನು ಪ್ರತಿನಿಧಿಸುವ ಮಾದ್ಯಮವೂ ಆಗಿದೆ ಎಂದು ವಿಶೇಷ ಉಪನ್ಯಾಸ ನೀಡಿದ ಎಸ್‌ಎಸ್‌ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಜ್ವಲ್.ಜೆ ಹೇಳಿದರು.
ಎಸ್‌ಎಸ್‌ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಜ್ವಲ್.ಜೆ ವಿಶೇಷ ಉಪನ್ಯಾಸ ನೀಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ.ವಿ.ಭಟ್, ಮನೋಹರ ರೈ, ಶೋಭಾ ಗಿರಿಧರ್,ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಚಂದ್ರಶೇಖರ್ ಮರ್ದಾಳ, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲ ದಿನೇಶ್ ಉಪಸ್ಥಿತರಿದ್ದರು.
ರಥಬೀದಿಯಲ್ಲಿ ಯೋಗ :
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ರಥಬೀದಿಯಲ್ಲಿ ಯೋಗಾಸನ ಮಾಡುವ ಯೋಗ ಪ್ರಥಮಬಾರಿಗೆ ದೊರಕಿತು. ಸುಮಾರು ೭೦೦ಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ಯೋಗಾಸನ ಮಾಡಿದರು. ಯೋಗ ಗುರುಗಳಾದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್ ಮತ್ತು ದೇವಳದ ಸಿಬ್ಬಂದಿ ಬಾಲಕೃಷ್ಣ ಆರ್. ಯೋಗಾಭ್ಯಾಸ ಮಾಡಿಸಿದರು. ಸಹಾಯಕ ಆಯುಕ್ತರು, ಶ್ರೀ ದೇವಳದ ಆಡಳಿತ ಮಂಡಳಿ, ದೇವಳದ ಸಿಬ್ಬಂದಿಗಳು, ಎಸ್‌ಎಸ್‌ಪಿಯು ಕಾಲೇಜು, ಕೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳು ಸುಮಾರು ಒಂದು ಗಂಟೆಗಳ ಕಾಲ ವಿವಿಧ ಆಸನಗಳನ್ನು ಮಾಡಿದರು.ಅಲ್ಲದೆ ಯೋಗಾಸನವನ್ನು ದಿನಚರಿಯನ್ನಾಗಿ ಪ್ರತಿದಿನಮಾಡುವ ಪ್ರತಿಜ್ಞೆ ಸ್ವೀಕರಿಸಿದರು.