ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ ಸುಮಾರು 12 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸಿ ವರ್ಗಾವಣೆಗೊಂಡ ಶ್ರೀಮತಿ ಶೀತಲ್ ಯು.ಕೆ ಇವರ ಬೀಳ್ಕೊಡುಗೆ ಸಮಾರಂಭ ಜೂ.11ರಂದು ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಜಾನಕಿ ಮುರುಳ್ಯ ಮಾತನಾಡಿ ಪ್ರಾಮಾಣಿಕ ಸೇವೆಯನ್ನು ಎಲ್ಲರೂ ಮೆಚ್ಚುತ್ತಾರೆ ಎನ್ನುವುದಕ್ಕೆ ಇವತ್ತಿನ ಈ ಅದ್ದೂರಿ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು. ಕಾರ್ಯಕ್ರಮದ ಅತಿಥಿ ಸಾಮಾಜಿಕ ಧುರಿಣ ಶ್ರೀ ಮಾಧವ ಗೌಡ ಜಾಕೆ ಶ್ರೀಮತಿ ಶೀತಲ್ ಯು.ಕೆ ಇವರನ್ನು ಸನ್ಮಾನಿಸಿ ಅಭಿನಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮಹದೇವ ಎಸ್.ಪಿ.ಶೀತಲ್ ಮೇಡಂ ರವರ ಕರ್ತವ್ಯ ಪ್ರಜ್ಞೆ ಮತ್ತು ಅವರ ಅವಧಿಯಲ್ಲಿ ಶಾಲಾ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವನಿತಾ ಸುವರ್ಣ, ಸದಸ್ಯರಾದ ಶ್ರೀ ಕರುಣಾಕರ ಗೌಡ ಹುದೇರಿ, ಶ್ರೀ ಸುಂದರ ಗೌಡ ಪಾಪುತ್ತಡಿ, ಶ್ರೀಮತಿ ಪುಷ್ಪಲತಾ ಮತ್ತು ಶ್ರೀ ಮಾಧವ ಗೌಡ ಕಾಮಧೇನು, ಶ್ರೀ ರಮೇಶ ಕೋಟೆ ಭಾಗವಹಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳು, ಪೋಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು ಶ್ರೀಮತಿ ಶೀತಲ್ ಮೇಡಂ ರವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಹಿರಿಯ ಶಿಕ್ಷಕಿ ಸುಮಿತ್ರಾ ಕೆ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ರಾಮಚಂದ್ರ ಗೌಡ ವಂದಿಸಿದರು. ಶ್ರೀಮತಿ ಉಷಾ ಕೆ.ಎಸ್.ಅಭಿನಂದನಾ ಪತ್ರ ವಾಚಿಸಿದರು. ಶ್ರೀ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಿಕ್ಷಕರ ಯಕ್ಷಗಾನ ಒಕ್ಕೂಟ ಸುಳ್ಯ ಇದರ ಸದಸ್ಯರಿಂದ ತಾಳಮದ್ದಳೆ ‘ಕೃಷ್ಣಾರ್ಜುನ ಕಾಳಗ ‘ ನಡೆಯಿತು.
- Saturday
- November 23rd, 2024