ಅರಂತೋಡು – ಎಲಿಮಲೆ ರಸ್ತೆಯ ಅಭಿವೃದ್ಧಿಗೆ ವಿಳಂಬ ಮಾಡುತ್ತಿರುವ ಆಡಳಿತವನ್ನು ಎಚ್ಚರಿಸುವ ಸಲುವಾಗಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿ ಪೋಸ್ಟರ್ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾಲೂಕಿನಲ್ಲಿ ಅತೀ ಅಗತ್ಯ ಆಗಲೇಬೇಕಾದ ಕೆಲಸಗಳ ಪಟ್ಟಿಯಲ್ಲಿರುವ ಈ ಪಿಡಬ್ಲ್ಯೂಡಿ ರಸ್ತೆ ಜನಪ್ರತಿನಿಧಿಗಳ ಉದಾಸಿನದಿಂದ ಅಭಿವೃದ್ಧಿಯಾಗದೇ ಜನತೆ ಸಂಕಷ್ಟ ಪಡುವಂತಾಗಿದೆ. ಈ ರಸ್ತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾಧಿಗಳು ಸೇರಿದಂತೆ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ರಸ್ತೆಯ ಅಗಲೀಕರಣದ ಬಗ್ಗೆ ಮನವಿ ಮಾಡಿದರೂ ಕಡೆಗಣಿಸಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದಾದರೊಂದು ಕಾರಣ ನೀಡಿ ಜನರಿಗೆ ವಂಚನೆ ಮಾಡುತ್ತಿದ್ದಾರೆ.
ಅರಂತೋಡು ಗ್ರಾಮದ ಅಡ್ತಲೆ ವಾರ್ಡಿನ ಗ್ರಾಮಸ್ಥರು ಕಳೆದ ಬಾರಿ ಹೋರಾಟ ಸಮಿತಿ ರಚನೆ ಮಾಡಿ ರಸ್ತೆ ಹಾಗೂ ಮೊಬೈಲ್ ಸಂಪರ್ಕ ಸರಿಪಡಿಸಲು ಒತ್ತಡ ಹೇರಿದ್ದರು. ರಸ್ತೆ ಅಭಿವೃದ್ಧಿಯಾಗದಿದ್ದರೇ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ನಿರ್ಧಾರ ಮಾಡಲಾಗುವುದು ಎಂದು ಬ್ಯಾನರ್ ಅಳವಡಿಸುವುದರ ಜತೆಗೆ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.