ಭಾರತೀಯ ಕಿಶಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ಹಲ್ಲೆ ನಡೆಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಸುಳ್ಯದ ರೈತ ಮುಖಂಡರು ಜೂ.7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಾಜಾಕ್ಷ ಭೂತಕಲ್ಲು ಮಾತನಾಡಿ, ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ರವರು ಮೇ. 30 ರಂದು ಮಾಧ್ಯಮದೊಂದಿಗೆ ಬೆಂಗಳೂರು ಗಾಂಧಿಭವನದಲ್ಲಿ ಸಮಾನ ಮನಸ್ಕರ ಆತ್ಮವಲೋಕನ ಸಭೆಯಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಭಾರತ್ ರಕ್ಷಣಾ ವೇದಿಕೆ ಅಧ್ಯಕ್ಷ ಭರತ್ ಶೆಟ್ಟಿ, ಪ್ರದೀಪ್ ಹಾಗೂ ಶಿವಕುಮಾರ್‌ರವರು ಮೈಕ್‌ನಿಂದ ಹಲ್ಲೆ ನಡೆಸಿ, ಮಸಿ ಎರಚಿರುವುದರ ಬಗ್ಗೆ ಖಂಡಿನೆ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಲ್ಲೆ ಮಾಡಿರುವುದು ಮಾಧ್ಯಮ ದುರ್ಬಳಕೆ ಮಾಡಿಕೊಂಡಂತೆ ಹಾಗೂ ಮಾಧ್ಯಮದವರಿಗೆ ಕೂಡಾ ಅವಮಾನವಾದಂತೆ ಎಂದರು. ಕೇಂದ್ರ ಸರಕಾರ ರೈತರೊಂದಿಗೆ ಚರ್ಚಿಸದೆ ಸುಗ್ರೀವಾಜ್ಞೆ ಮೂಲಕ ಹೊರತಂದ 3 ಕೃಷಿ ಕಾಯಿದೆ ವಿಷಯದಲ್ಲಿ ಒಂದು ವರ್ಷಕ್ಕೂ ಮೇಲ್ಪಟ್ಟು ಹೋರಾಟ ನಡೆಸಿ ಯಶಸ್ವಿಯಾದ ರೈತ ನಾಯಕರೊಂದಿಗೆ ಈ ರೀತಿ ನಡೆದುಕೊಂಡದ್ದು, ಪ್ರತಿಯೊಬ್ಬ ರೈತನಿಗೆ ಹಾಗೂ ಹೋರಾಟ ಮುಖಂಡರಿಗೆ ನಡೆದ ಅವಮಾನ ಹಾಗೂ ಭಾರತ್ ರಕ್ಷಣಾ ವೇದಿಕೆಯ ಅಧ್ಯಕ್ಷ ಭರತ್ ಶೆಟ್ಟಿ, ಪ್ರದೀಪ್ ಹಾಗೂ ಶಿವಕುಮಾರ್‌ರವರ ಮೇಲೆ ತನಿಖೆ ನಡೆಸಿ ದೇಶದ್ರೋಹದ ಕಾನೂನನ್ನು ಜಾರಿಗೊಳಿಸಬೇಕು. ಅಲ್ಲದೇ ಇವರಿಗೆ ಪ್ರಚೋದನೆ ನೀಡಿದವರಿಗೂ ದೇಶದ್ರೋಹ ಕೇಸು ದಾಖಲಿಸಬೇಕು. ಇಲ್ಲದಿದ್ದಲ್ಲಿ ರೈತ ಸಂಘವು ಬೃಹತ್ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ತೀರ್ಥರಾಮ ಪರ್ನೋಜಿ, ಗೋಪಾಲ್ ಪೆರಾಜೆ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕೆ, ಮಂಜುನಾಥ ಐವರ್ನಾಡು ಉಪಸ್ಥಿತರಿದ್ದರು.
- Thursday
- November 21st, 2024