ಪೋಲೀಸರ ಮೇಲೆ ಹಲ್ಲೆ ನಡೆಸಿದರೆನ್ನಲಾದ ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ವಿವರ : ಸುಳ್ಯ ಪೋಲೀಸ್ ಠಾಣಾ ಗುಪ್ತವಾರ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ ಸ್ಟೇಬಲ್ ಬಾಲಕೃಷ್ಣ ಎಂಬವರು ಇಲಾಖಾ ಮೋಟಾರ್ ಸೈಕಲಿನಲ್ಲಿ ಠಾಣಾ ಸಿಬ್ಬಂದಿ ಪಂಪಾಪತಿ ರೆಪ್ಪಿ ಎಂಬುವವರೊಂದಿಗೆ 2013 ಮೇ.12 ರಂದು ಸಂಜೆ ಅಮರಮುಡ್ನೂರು ಗ್ರಾಮದ ದೊಡ್ಡತೋಟ ಮೇರ್ಕಜೆ ಎಂಬಲ್ಲಿಗೆ ತಲುಪಿದ್ದರು. ಈ ವೇಳೆ 4 ಮಂದಿ ಆರೋಪಿಗಳು ರಸ್ತೆಯಲ್ಲಿ ಮಲಗಿ ವಾಹನ ಸಂಚಾರಕ್ಕೆ ತೊಂದರೆಯನ್ನುಂಟುಮಾಡುತ್ತಿದ್ದವರನ್ನು ವಿಚಾರಿಸಿದಾಗ ಆರೋಪಿಗಳೆಲ್ಲರು ಒಟ್ಟಾಗಿ ಪೋಲಿಸರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಯನ್ನು ಮಾಡಿರುತ್ತಾರೆ ಮತ್ತು ಕೊಲೆಯನ್ನು ಮಾಡಲು ಪ್ರಯತ್ನಿಸಿರುತ್ತಾರೆ ಎಂದು ಆರೋಪಿಗಳ ಮೇಲೆ ಸುಳ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯನ್ನು ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ಸುಳ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು .ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಳ್ಯ ಹಿರಿಯ ಸಿವಿಲ್ ಜಡ್ಜ್ ಮತ್ತು ಮ್ಯಾಜಿಸ್ಟ್ರೇಟರ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್. ಎ. ರವರು ಅಭಿಯೋಜಕವು ಆರೋಪಿಗಳ ಮೇಲಿನ ಆರೋಪವನ್ನು ಸಾಭೀತುಪಡಿಸುವರೆ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಗಳಾದ ಸುರೇಶ್, ಮೋಹನ್‌ದಾಸ್, ಹರೀಶ್ ಮತ್ತು ಭುವನೇಶ್ವರ ಇವರನ್ನು ಆರೋಪದಿಂದ ದೋಷಮುಕ್ತಿಗೊಳಿಸಿ ತೀರ್ಪನ್ನು ನೀಡಿದ್ದಾರೆ.
ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ನಾರಾಯಣ.ಕೆ, ಚಂದ್ರಶೇಖರ.ಬಿ, ವಿಪುಲ್.ಎನ್.ವಿ, ಅನಿತಾ ಆರ್.ನಾಯಕ್ ಮತ್ತು ಅಕ್ಷತಾ ಇವರು ವಾದಿಸಿದ್ದರು.