
ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ಕಾಲ ಕೂಡಿಬಂದಿದ್ದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಜ.11ರಂದು ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮ ವಾಸ್ತವ್ಯ ಮಾಡಿದುದರ ಪಲಶ್ರುತಿಯಾಗಿ ಈ ರಸ್ತೆ ಅಭಿವೃದ್ಧಿ ಕಾಣಲಿದೆ. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಜನರಿಂದ ಕೇಳಿ ಬಂದ ಪ್ರಮುಖ ಬೇಡಿಕೆಯಾಗಿತ್ತು.ಬಳಿಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದ ಪತ್ರಕರ್ತರ ನಿಯೋಗ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಡಪ್ಪಾಡಿಯ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು 1.5ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಎಲಿಮಲೆಯಿಂದ ಮಡಪ್ಪಾಡಿಗೆ 9 ಕಿ.ಮಿ.ದೂರವಿದೆ. ಎಲೆಮಲೆ- ಅರಂತೋಡು ಲೋಕೋಯೋಗಿ ರಸ್ತೆಯ ಸೇವಾಜೆಯಿಂದ ಮಡಪ್ಪಾಡಿಗೆ 5 ಕಿ.ಮಿ.ದೂರ ಇದೆ. ಇದರಲ್ಲಿ 1.5 ಕಿ.ಮಿ. ರಸ್ತೆ ಅಭಿವೃದ್ಧಿಯಾಗಿದೆ. ಉಳಿದ 3.5 ಕಿ.ಮಿ. ರಸ್ತೆಗೆ ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿದ ಈ ಅನುದಾನದಲ್ಲಿ ರಸ್ತೆಯ 3.5 ಕಿ.ಮಿ. ಅಭಿವೃದ್ಧಿಯಾಗಲಿದೆ ಎಂದು ತಿಳಿದು ಬಂದಿದೆ.