ಸುಳ್ಯ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಂಗಳೂರಿನ ವಾರ್ತಾವಾಹಿನಿ V4 ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಸುಳ್ಯದ ಚಿಣ್ಣರು ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಸುದ್ದಿ ವಾಹಿನಿ ಶಾಲಾ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಉದ್ದೀಪನಗೊಳಿಸುವ ಹಾಗೂ ಉತ್ತಮ ಸಂದೇಶ ಸಾರುವ ಕಿರುಚಿತ್ರ ಹಾಗೂ ದೇಶಭಕ್ತಿ ಹಾಡುವ ಸ್ಪರ್ಧೆಗಳನ್ನು ಆನ್ಲೈನ್ ಮುಖಾಂತರ ಆಯೋಜಿಸಿತ್ತು. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ತಾಲೂಕಿನ ತೃಪ್ತಿ, ಸಮೃದ್ಧ್, ತನ್ವಿತ್, ಪ್ರಕೃತಿ ಹಾಗೂ ತನುಷ್ ಎಂಬ ಐವರು ವಿದ್ಯಾರ್ಥಿಗಳು ಭಾಗವಹಿಸಿದ್ದ ‘ಜನನಿಗಾಗಿ ಈ ಜೀವ’ ಕಿರುಚಿತ್ರ ಪ್ರಥಮ ಬಹುಮಾನ ಪಡೆದುಕೊಂಡಿದೆ. ಇದರಲ್ಲಿ ತೃಪ್ತಿ ಹಾಗೂ ಪ್ರಕೃತಿ ಮಂಗಳೂರಿನ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಸತಿ ಶಾಲಾ ವಿದ್ಯಾರ್ಥಿಗಳಾಗಿದ್ದರೆ, ಸಮೃದ್ಧ್ ಹಾಗೂ ತನ್ವಿತ್ ಮಂಗಳೂರಿನ ಪದುವಾ ಶಾಲಾ ವಿದ್ಯಾರ್ಥಿಗಳು. ಇನ್ನೋರ್ವ ವಿದ್ಯಾರ್ಥಿ ತನುಷ್, ಅಡ್ಕಾರಿನ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ವಿನೋಭಾ ನಗರ ಶಾಲಾ ವಿದ್ಯಾರ್ಥಿ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಲಾಕ್ ಡೌನ್ ಹೇರಿಕೆಯಾದಾಗ ಶಾಲೆಗೆ ರಜೆ ಇದ್ದ ಸಂದರ್ಭ ಈ ಕಿರುಚಿತ್ರವನ್ನು ಮೊಬೈಲ್ ಫೋನ್ ನಲ್ಲೇ ಚಿತ್ರೀಕರಣ ನಡೆಸಿ ಸ್ಪರ್ಧೆಗೆ ಕಳುಹಿಸಲಾಗಿತ್ತು ಎಂಬುದು ವಿಶೇಷ.
ದೇಶಭಕ್ತಿ ಗೀತೆ ಹಾಡಿನಲ್ಲಿ ಜನನಿ ಗೆ ಪ್ರಥಮ
ಇದೇ ವಾರ್ತಾವಾಹಿನಿ ಆಯೋಜಿಸಿದ ದೇಶಭಕ್ತಿ ಗೀತೆ ಹಾಡಿನಲ್ಲಿ ಮಂಡೆಕೋಲು ಗ್ರಾಮದ ದಿನಕರ ಹಾಗೂ ಭವ್ಯ ದಂಪತಿಯ ಪುತ್ರಿ ಜನನಿ ಪಿ.ಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ವಿನೋಭಾ ನಗರ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ.
ಅಕ್ಟೋಬರ್ ೨೧ ರ ಗುರುವಾರ V4 ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಯಿತು.