ಸುಬ್ರಹ್ಮಣ್ಯ: ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದ ದ.ಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30ರ ತನಕ ಯಾವುದೇ ಸೇವೆಗಳು ನಡೆಯುವುದಿಲ್ಲ. ಕೇವಲ ಶ್ರೀ ದೇವರ ದರುಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುವುದಿಲ್ಲ. ಶನಿವಾರ ಮತ್ತು ಆದಿತ್ಯವಾರ ವಾರಾಂತ್ಯದ ದಿನಗಳಲ್ಲಿ ಶ್ರೀ ದೇವರ ದರುಶನಕ್ಕೆ ಕೂಡಾ ಅವಕಾಶ ನಿರ್ಬಂಧಿಸಲಾಗಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ದ.ಕ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್-19 ಪ್ರಕರಣಗಳು ಅಧಿಕವಾಗಿರುವುದರಿಂದ ಭಕ್ತರ ಆರೋಗ್ಯ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆಯಲ್ಲಿ ಆ.30ರ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ, ಚವಲ, ಪಂಚಾಮೃತ ಮಹಾಭಿಷೇಕ, ಪ್ರಾರ್ಥನೆ ಸೇರಿದಂತೆ ಯಾವುದೇ ಸೇವೆಗಳು ನಡೆಯುವುದಿಲ್ಲ. ಬೆಳಗ್ಗೆ 7.00ರಿಂದ ಮಧ್ಯಾಹ್ನ 11.30 ತನಕ, ಮಧ್ಯಾಹ್ನ 12.15- 1.30 ಹಾಗೂ 2.30ರಿಂದ ರಿಂದ ಸಂಜೆ 7.00 ತನಕ ಭಕ್ತರು ಶ್ರೀ ದೇವರ ದರುಶನ ಮಾಡಬಹುದು. ಅಲ್ಲದೆ ಈ ಸಂದರ್ಭ ಮಂಗಳಾರತಿ ಸೇವೆ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾರಾಂತ್ಯ ದಿನಗಳನ್ನು ಹೊರತು ಪಡಿಸಿ ಇತರ ದಿನಗಳಲ್ಲಿ ವಸತಿ ಗೃಹದಲ್ಲಿ ತಂಗಲು ಅವಕಾಶವಿದೆ.ತಂಗುವ ಭಕ್ತರು 72 ಗಂಟೆಯೊಳಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
- Thursday
- November 21st, 2024