ಸಾಲ ಪಡೆದು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಲಕ್ಕೆ ಜಾಮೀನು ಹಾಕಿದವರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಸಾಲ ಪಡೆದವರು ಅದನ್ನು ತೀರಿಸಲು ವಿಫಲರಾದರೆ ವೈಯಕ್ತಿಕ ಜಾಮೀನುದಾರರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ.
ಕಾರ್ಪೋರೇಟ್ ಸಾಲಗಾರರಿಗೆ ಇಲ್ಲವೇ ಕಂಪೆನಿಗಳಿಗೆ ನೀಡಲಾದ ಸಾಲಕ್ಕೆ ಜಾಮೀನು ಕೊಡುವವರಿಗೆ ಎಚ್ಚರಿಕೆಯ ಸಂದೇಶವನ್ನು ಸುಪ್ರೀಂ ಕೋರ್ಟ್ ರವಾನಿಸಿದೆ. ಸಾಲ ಪಡೆದವರಿಗೆ ಜಾಮೀನು ಹಾಕಿದ ವ್ಯಕ್ತಿಗಳು ಸಾಲದ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಜಾಮೀನುದಾರರು ಕೂಡ ಸಾಲಕ್ಕೆ ಬಾಧ್ಯಸ್ಥರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾಲ ಪಡೆದು ತೀರಿಸಲು ವಿಫಲರಾದ ಸಂದರ್ಭದಲ್ಲಿ ಜಾಮೀನು ನೀಡಿದ್ದ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳಲು ಬ್ಯಾಂಕುಗಳಿಗೆ ಕಾನೂನಾತ್ಮಕ ಅನುಮೋದನೆ ಸಿಕ್ಕಿದಂತಾಗಿದೆ. ಹೀಗಾಗಿ ಕೇಂದ್ರ ಸರಕಾರದ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯಡಿಯಲ್ಲಿ ಬ್ಯಾಂಕುಗಳಿಗೆ ಅಧಿಕಾರ ನೀಡುವ ಅಧಿಸೂಚನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಹೀಗಾಗಿ ಇನ್ಮುಂದೆ ಬ್ಯಾಂಕುಗಳ ಸಾಲಕ್ಕೆ ಜಾಮೀನು ಹಾಕುವ ಮುನ್ನ ಎಚ್ಚರವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.