ಕೋವಿಡ್ 19 ಮಹಾಮಾರಿ ವಿಶ್ವವನ್ನೇ ಕಂಗೆಡಿಸಿ ಇದೀಗ ಒಂದು ವರ್ಷ ಕಳೆದಿದ್ದು ಕೋವಿಡ್‌ನ ಎರಡನೇ ಅಲೆ ಬರಸಿಡಿಲಿನಂತೆ ಸಮಾಜಕ್ಕೆ ಅಪ್ಪಳಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಭೀಕರತೆ ಕಾಣಿಸುತ್ತಿದೆಯಾದರೂ ಈ ವೈರಸ್ ಅನ್ನು ಸಮರ್ಥವಾಗಿ ಎದುರಿಸಲು ದೇಶದ ವೈದ್ಯರು, ವಿಜ್ಞಾನಿಗಳು, ತಜ್ಞರು ಸದೃಢವಾಗಿ ಸಿದ್ಧರಾಗಿರುವುದು ಆಶಾಸ್ಪದ ಸಂಗತಿ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆದಷ್ಟು ಮನೆಯಲ್ಲೇ ಇದ್ದು ಈ ವೈರಸ್‌ನ ಸರಪಳಿ ತುಂಡು ಮಾಡುವುದು ಸದ್ಯಕ್ಕಿರುವ ಪರಿಹಾರ ಎಂಬುದು ತಜ್ಞರ ಅಭಿಪ್ರಾಯ. ಈ ಉದ್ದೇಶದಿಂದ ಸರಕಾರ ಇದೀಗ ಜನತಾ ಕರ್ಪ್ಯೂ ಘೋಷಿಸಿದೆ. ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎಂಬ ಗೀತೆಯ ಸಾಲಿನ ಅರ್ಥದಂತೆ ಸೇವಾ ಭಾರತಿ ಕಾರ್ಯಕರ್ತರು ಕೂಡಾ ಈ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದ ಜನರಿಗೆ ಸಹಕಾರ ನೀಡಲು ಸನ್ನದ್ಧರಾಗಿದ್ದಾರೆ.
ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನ 44 ಗ್ರಾಮಗಳಲ್ಲಿ ಸೇವಾಭಾರತಿ ತನ್ನ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲಿದೆ. ವೈದ್ಯಕೀಯ ವ್ಯವಸ್ಥೆ, ರಕ್ತನಿಧಿ, ನಿರಾಶ್ರಿತರ ವ್ಯವಸ್ಥೆ, ಆಂಬುಲೆನ್ಸ್ ವ್ಯವಸ್ಥೆ, ಅಂತ್ಯ ಸಂಸ್ಕಾರ ವ್ಯವಸ್ಥೆ ಯಾವುದೇ ರೀತಿಯ ತುರ್ತು ಅವಶ್ಯಕತೆಗಳಿಗೆ ಗ್ರಾಮದಲ್ಲಿ ಸಹಕಾರ ನೀಡಲು ಪ್ರತೀ ಗ್ರಾಮಕ್ಕೆ ಎರಡು ಮೂರು ಜನ ಸೇವಾಭಾರತಿ ಕಾರ್ಯಕರ್ತರ ಪಟ್ಟಿಯನ್ನು ಮತ್ತು ಸಂಪರ್ಕ ಸಂಖ್ಯೆಯನ್ನು ವರದಿಯ ಜತೆಗೆ ನೀಡಲಾಗಿದೆ. ಸಾರ್ವಜನಿಕರು ಯಾವುದೇ ಸಮಯದಲ್ಲಿ ಈ ವ್ಯವಸ್ಥೆಯ ಸದುಪಯೋಗ ಪಡಕೊಳ್ಳಬಹುದು ಎಂದು ಸೇವಾ ಭಾರತಿ ಪ್ರಕಟಣೆಯಲ್ಲಿ ತಿಳಿಸಿದೆ.