ಕೊರೋನಾ ಎರಡನೇ ಅಲೆ…ಮತ್ತೆ ಬುಗಿಲೆದ್ದಿದೆ. ಜನರ ಆರ್ತನಾದನ ಮುಗಿಲು ಮುಟ್ಟಿದರೂ ಕೇಳೋರಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಇನ್ನೇನು ಎಲ್ಲವು ಸರಿಯಾಗಿ ನಡೀತಿದೆ ಅನ್ನೋವಾಗ್ಲೆ ಮತ್ತೆ ಒಕ್ಕರಿಸಿಕೊಂಡಿರುವ ಈ ಮಹಾಮಾರಿಯ ಬಗ್ಗೆ ಏನು ಹೇಳೋದು..? ದಿನೇದಿನೇ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಪರಿಹಾರ…? ಕಾರಣ…? ಹೀಗೇ ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಂದನ್ನು ಹುಡುಕುತ್ತಾ ಹೋದಂತೆ ಪ್ರಶ್ನೆಗಳೇ ಹೆಚ್ಚಾಗಿ ಕಾಣಿಸ್ತಿವೆ ಹೊರತು. ಉತ್ತರ ಎಲ್ಲಿಯೂ ಸಿಗ್ತಾ ಇಲ್ಲ.
‘ದಿನಾ ಸಾಯೋರಿಗೆ ಅಳೋರಿಲ್ಲ’ ;
ದಿನನಿತ್ಯ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡು ಸಂಪಾದನೆ ಮಾಡ್ತಾ ಇರೋರು ಈಗ ಮತ್ತೆ ಕೈ ಕಟ್ಟಿ ಕುಳಿತುಕೊಳ್ಳೋ ಪರಿಸ್ಥಿತಿ. ಅದಕ್ಕೆ ಸರಿಯಾಗಿ ಕೆಲವೊಂದು ಆಸ್ಪತ್ರೆಗಳ ‘ಹಣ ದಾಹ’. ಸಂಪಾದನೆ ಮಾಡಿದ್ದೆಲ್ಲವನ್ನೂ ಹೀಗೆ ಕೊರೋನಾಕ್ಕಾಗಿ ಆಸ್ಪತ್ರೆಗಳಿಗೆ ಸಾವಿರ ಲಕ್ಷಗಟ್ಟಲೆ ಸುರಿದು ಬಿಟ್ಟರೆ ಮತ್ತೆ ಬದುಕಿರೋರ ಜೀವನ…? ಬದುಕಿಸೋದಕ್ಕಾಗಿ ಹಣ ನೀಡಿದರೂ ಮತ್ತೆ ಆ ಜೀವ ಗುಣಮುಖವಾಗಿ ಹೊರಗಡೆ ಬರೋದು ಗ್ಯಾರಂಟಿ ಇಲ್ಲ. ಇಂಥಾ ಸಾವಿಗೆ ಕಷ್ಟಪಟ್ಟು ದುಡಿದು ಜೀವಿಸೋರ ಹಣವೇ ಬೇಕಾಗಿದ್ದಾ…? ‘ದಿನಾ ಸಾಯೋರಿಗೆ ಅಳೋರಿಲ್ಲ’ ಅನ್ನೋ ಮಾತಿನಂತೆ.. ದಿನನಿತ್ಯ ಆಗೋ ಈ ಭ್ರಷ್ಟಾಚಾರಕ್ಕೆ ಮಾತ್ನಾಡೋರು ಯಾರಿಲ್ಲದ ಪರಿಸ್ಥಿತಿ. ಇಂಥಾ ತುರ್ತು ಸಂದರ್ಭದಲ್ಲಿ ಪರಿಹಾರವಾಗಿ ಏನು ಮಾಡ್ಬೇಕು ಅದು ಮಾಡ್ತಾ ಇಲ್ಲ. ಇದು ಆಡಳಿತ ನಡೆಸುವವರ ತಪ್ಪಾ… ಅಥವಾ ಜನರ ಆಯ್ಕೆಯೇ ತಪ್ಪಾಗಿ ಹೋಯ್ತಾ… ಎಂದು ಹಣೆ ಹಣೆ ಬಡಿದುಕೊಂಡು ಸಿಲಿಕಾನ್ ಸಿಟಿಯಲ್ಲಿ ಶವ ಸುಡೋದಕ್ಕೆ ಬಂದಿರೋ ಮನೆಯವರ ಕೂಗು.
ಪ್ರತೀ ಪ್ರಜೆಯ ಜವಾಬ್ದಾರಿ ಅರಿತು ನಡೆಯಲಿ ;
ಪ್ರತೀ ದಿನ ಸಾವು, ನೋವು, ಮತ್ತದೇ ಸೋಂಕಿತರ ಅಳಲು. ಬಹುಶಃ ಇದಕ್ಕಿನ್ನು ಅಂತ್ಯವೇ ಇಲ್ಲವೇನೋ ಅನ್ನಿಸಿಬಿಟ್ಟಿದೆ. ಪರಿಹಾರ ಹುಡುಕಿಕೊಂಡು ಹೋದಷ್ಟು ಕೊರೋನಾಕ್ಕಿಂತ ಹೆಚ್ಚಾಗಿ ಭ್ರಷ್ಟರೇ ತುಂಬಿಕೊಂಡಿರೋ ಸಮಾಜದಲ್ಲಿ ಜನಸಾಮಾನ್ಯರಿಗಿನ್ನು ಬದುಕೋದು ತುಂಬಾನೇ ಕಷ್ಟ. ಎಲ್ಲದರಲ್ಲೂ… ಎಲ್ಲರಲ್ಲೂ ಹೀಗಿಲ್ಲ ನಿಜ. ಆದರೆ, ಅಲ್ಲೊಂದು ಇಲ್ಲೊಂದು ಎಂಬಂತೆ ದೂರಗಣ್ಣಿಗೆ ಕಾಣಿಸಿಕೊಳ್ತಾ ಇದ್ದೋರು ಈಗ ಕಾಲುಬುಡಕ್ಕೇ ಬಂದು ನಿಂತಿರೋ ನೆಲವನ್ನೂ ನುಂಗಲು ಕಾದಾಡುತ್ತಿದ್ದಾರೆ. ದಿನೇದಿನೇ ಬಿಡಿಗಾಸಿನ ಸಂಪಾದನೆಯನ್ನು ನಂಬಿ ಬದುಕೋರ ಸಂಖ್ಯೆಯೂ ಹೆಚ್ಚಾಗ್ತಾ ಇದೆ. ಇವೆಲ್ಲದಕ್ಕೂ ಕೊನೆ ಅನ್ನೋದು ಇದ್ದರೆ, ಅದು ಪ್ರತೀ ಒಬ್ಬೊಬ್ಬ ವ್ಯಕ್ತಿಯು ಯೋಚನೆ ಮಾಡಬೇಕು. ಕೇವಲ ತನ್ನ ಪರಿಧಿಯೊಳಗೆ ಸುತ್ತೋದು ಬಿಟ್ಟು ತನ್ನ ಸುತ್ತಮುತ್ತಲು ನಡಿತ ಇರುವ ಅನ್ಯಾಯ, ಅಕ್ರೋಶದೆಡೆ ನ್ಯಾಯಯುತವಾಗಿ ಅಧಿಕಾರ ನಡೆಸಬೇಕು.
ಖರ್ಚಾಗಿ ಹೊಗೋ ಹಣಕ್ಕೆ, ಹೆಣಗಳು ಕಾರಣವಾಗದಿರಲಿ ;
ನಮ್ಮ ದೇಶಕ್ಕೆ ಶಿಕ್ಷಣದ ಬಡತನವಿಲ್ಲವಲ್ಲ…? ಶಿಕ್ಷಣದ ಕೊರತೆಯಿದ್ದಿದ್ದರೆ ಎಲ್ಲರೂ ತಲೆಬಾಗಿಸಿ ನಡೆಯಬಹುದಿತ್ತೇನೋ. ಆದರೆ, ಪ್ರಸ್ತುತ ನೋಡೋದಾದ್ರೆ ಕೊರೋನಾಕ್ಕಿಂತ ತಿಳಿದೋರ ದಬ್ಬಾಳಿಕೆಯೇ ಹೆಚ್ಚಾಗ್ತಾ ಇದೆ. ಕೇವಲ ಖರ್ಚಾಗಿ ಹೋಗೋ ಹಣಕ್ಕಾಗಿ, ಹೆಣವನ್ನು ಎದುರಿಗಿಟ್ಟು ತಮ್ಮ ದಾಹ ತೀರಿಸಿಕೊಳ್ಳುತ್ತಿದ್ದಾರೆ.
ಕೊರೋನಾ ಸಮಸ್ಯೆ ಕಡಿಮೆಯಾಗುತ್ತೋ … ಅದಕ್ಕಿಂತ ಮೊದಲು ಮಾನವೀಯತೆ ಸುಟ್ಟು ಕರಕಲಾಗದಿದ್ದರೆ ಸಾಕು.
📝ಲಿಖಿತಾ ಗುಡ್ಡೆಮನೆ.