ಪಂಜ: ಇಲ್ಲಿಗೆ ಸಮೀಪದ ಚಿಂಗಾಣಿಗುಡ್ಡೆಯಲ್ಲಿ ಏಳು ವರ್ಷದ ಹಿಂದೆ ನಿರ್ಮಾಣವಾದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಗೆ ಇದುವರೆಗೆ ಒಂದು ತೊಟ್ಟು ನೀರು ಬಿದ್ದಿಲ್ಲ. ಇಲ್ಲಿಂದ ಎಲ್ಲಿಗೂ ಇದುವರೆಗೆ ನೀರು ಸರಬರಾಜು ಮಾಡಲಾಗದೆ ಟ್ಯಾಂಕ್ ನಿರ್ಮಿಸಿದ ಉದ್ದೇಶವೇ ವಿಫಲವಾಗಿದೆ.
ಏಳು ವರ್ಷದ ಹಿಂದೆ ಆಶಾ ತಿಮ್ಮಪ್ಪ ರವರು ಬೆಳ್ಳಾರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾಗ ಇಡೀ ಪಂಜಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಕನಸು ಕಂಡು ಅತಿ ಎತ್ತರದ ಪ್ರದೇಶವಾದ ಚಿಂಗಾಣಿಗುಡ್ಡೆಯಲ್ಲಿ ಒಂದು ಟ್ಯಾಂಕ್ ನಿರ್ಮಿಸಿ, ಪುಳಿಕುಕ್ಕುವಿನಲ್ಲಿ ಕುಮಾರ ನದಿಯಲ್ಲಿ ಒಂದು ಬಾವಿ(ಜಾಕ್ವೆಲ್) ನಿರ್ಮಾಣ ಯೋಜನೆಯನ್ನು ಜಾರಿಗೊಳಿಸಿದರು. ಪುಳಿಕುಕ್ಕು ವಿನಿಂದ ಜಿಂಗಾಣಿಗುಡ್ಡೆವರೆಗೆ 4.2 ಕಿ.ಮಿ. ಪೈಪ್ಲೈನ್ ಹಾಕಲಾಯಿತು. 10 ಅಶ್ವಶಕ್ತಿಯ ಪಂಪು ಕೂಡ ಅಳವಡಿಸಲಾಯಿತು
ಆದರೆ ಇದರಿಂದ ನೀರು ಸರಬರಾಜು ಮಾಡಲು ಸಾಧ್ಯವಾಗಲೇ ಇಲ್ಲ. ಚಿಂಗಾಣಿ ಗುಡ್ಡೆಗೆ ಬಿಡಿ ಜೂನಿಯರ್ ಕಾಲೇಜು ಬಳಿಯ ಟ್ಯಾಂಕ್ ಗೂ ಸರಿಯಾಗಿ ನೀರು ಬೀಳುತ್ತಿರಲಿಲ್ಲ. ನಂತರ ಅಧಿಕಾರಕ್ಕೆ ಬಂದವರು ಚಿದ್ಗಲ್ ಕಾರ್ಯಪ್ಪ ಗೌಡರ ನೇತೃತ್ವದ ಗ್ರಾಮ ಪಂಚಾಯತ್ ಪೈಪ್ ದುರಸ್ತಿಗೊಳಿಸಿ, ಏರ್ವಾಲ್, ರಿಟರ್ನಿಂಗ್ ವಾಲ್ ಗಳನ್ನು ಅಳವಡಿಸಿ 20 ಅಶ್ವಶಕ್ತಿಯ ಪಂಪು ಖರೀದಿಸಿ ತಂದು ಅಳವಡಿಸಿ ಜೂನಿಯರ್ ಕಾಲೇಜ್ ಟ್ಯಾಂಕ್ಗೆ ನೀರು ಬೀಳುವಂತೆ ಮಾಡಿದರು. ಆದರೆ ಚಿಂಗಾಣಿಗುಡ್ಡ ಟ್ಯಾಂಕಿಗೆ ನೀರು ಬರಿಸಲು ಅವರಿಂದ ಸಾಧ್ಯವಾಗಲಿಲ್ಲ. ಅಲ್ಲಿಯ ಅಷ್ಟು ದೊಡ್ಡ ಟ್ಯಾಂಕ್ ನಿರ್ಮಾಣಕ್ಕೆ ತಗಲಿದ ಖರ್ಚು, ಪೈಪ್ ಲೈನ್ ಖರ್ಚು, ಅಷ್ಟು ಮಾನವಶ್ರಮ ವ್ಯರ್ಥವಾಗಿದೆ. ಇದನ್ನು ಈಗ ಜನ ಕೇಳತೊಡಗಿದ್ದಾರೆ
- Thursday
- November 21st, 2024