ನೀರಬಿದಿರೆ ಕಮಿಲಡ್ಕ ಕೊಡಿಯಾಲಬೈಲ್ ಜಟ್ಟಿಪಳ್ಳಕ್ಕೆ ಸಾಗುವ ಕಾಲುದಾರಿ ಯಾವುದೇ ಅಭಿವೃದ್ಧಿ ಕಾಣದೇ ನಡೆದಾಡುವವರಿಗೆ ಹಾಗೂ ದ್ವಿಚಕ್ರ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಈ ಕಾಲುದಾರಿ ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿಯ ಜನರಿಗೆ ವಾಹನ ಸೌಕರ್ಯ ಕಡಿಮೆ ಇದ್ದ ವೇಳೆ ಇದೇ ಕಾಲುದಾರಿಯನ್ನೇ ಬಳಸಿ ಸುಳ್ಯಕ್ಕೆ ಹೋಗುತ್ತಿದ್ದರು. ಈಗಲೂ ಅತೀ ಹೆಚ್ಚು ಜನರು ಈ ಕಾಲುದಾರಿಯನ್ನೇ ಅವಲಂಬಿಸಿದ್ದಾರೆ. ನೀರಬಿದಿರೆ ಕಮಿಲಡ್ಕ ಭಾಗದ ವಿದ್ಯಾರ್ಥಿಗಳು ಕೂಡ ಇದೇ ಕಾಲುದಾರಿಯನ್ನು ಬಳಸಿ ಮಲ್ನಾಡ್ ಪ್ರೌಢಶಾಲೆ ಮತ್ತು ಕೊಡಿಯಲ್ ಬೈಲ್ ಪದವಿ ಕಾಲೇಜಿಗೆ ತೆರಳುತ್ತಾರೆ. ದ್ವಿಚಕ್ರ ವಾಹನ ಸವಾರರು ಕೂಡ ಸುಳ್ಯ ತಲುಪಲು ಹತ್ತಿರದ ಈ ದಾರಿಯನ್ನೇ ಬಳಸುತ್ತಾರೆ. ಇತ್ತೀಚೆಗೆ ಈ ದಾರಿಯಲ್ಲಿ ಮೆಟ್ಟಿಲು ನಿರ್ಮಿಸಿ ದ್ವಿಚಕ್ರ ಸವಾರರನ್ನು ತಡೆಯುವ ಪ್ರಯತ್ನ ಕೂಡ ನಡೆದಿದೆ. ಈಗ ಈ ದಾರಿಯಲ್ಲಿರುವ ಕಾಲುಸಂಕದ ತಡೆಬೇಲಿ ಮುರಿದು ಅಪಾಯಕಾರಿ ಸ್ಥಿತಿಯಲ್ಲಿದೆ. ಮಕ್ಕಳು ಜಾರಿ ಬಿದ್ದರೇ ತೋಡಿಗೆ ಬೀಳುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಪಾಯ ಸಂಭವಿಸುವ ಮೊದಲು ಅಭಿವೃದ್ಧಿ ಪಡಿಸಿ ಸಾರ್ವಜನಿಕ ಕಾಲುದಾರಿಯನ್ನು ಉಳಿಸಿಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
📞ಈ ಕಾಲು ದಾರಿ ಖಾಸಗಿಯವರ ಪಟ್ಟಾ ಸ್ಥಳದಲ್ಲಿ ಇರುವುದರಿಂದ ಹೆಚ್ಚಿನ ಅಭಿವೃದ್ಧಿ ಮಾಡಲು ಕಷ್ಟ, ಸ್ವಲ್ಪ ಅಗಲ ಅಥವಾ ಸಂಪರ್ಕ ರಸ್ತೆಯಾದರೇ ಒಳ್ಳೆಯದು ಈ ಬಗ್ಗೆ ಸಚಿವರಿಗೆ ಮನವಿ ಮಾಡುತ್ತೇವೆ. ಕಾಲುಸಂಕದ ತಡೆಬೇಲಿಯನ್ನು ಪಂಚಾಯತ್ ವತಿಯಿಂದ ಕೂಡಲೇ ದುರಸ್ತಿ ಮಾಡುತ್ತೇವೆ. ಈ ಹಿಂದೆ ಪಂಚಾಯತ್ ವತಿಯಿಂದ ಕಾಲು ದಾರಿಗೆ ಹಾಸುಗಲ್ಲು ಹಾಕಿದ್ದೇವು ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹರೀಶ್ ರೈ ಉಬರಡ್ಕ ಹೇಳಿದ್ದಾರೆ.