ಗೂನಡ್ಕದ ಮುಖ್ಯ ರಸ್ತೆ ಬಳಿ ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಒಂದು ವಿನೂತನ ಕಾರ್ಯ ಮಾಡಿದ್ದಾರೆ ಅಬ್ದುಲ್ ಖಾದರ್ ಗೂನಡ್ಕ.
ಸಂಪಾಜೆ ಗ್ರಾಮದ ಗೂನಡ್ಕ ಮುಖ್ಯ ರಸ್ತೆಯ ಬಳಿ ನೆಲೆಸಿರುವ ಅಂಗವಿಕಲರಾಗಿರುವ ಅಬ್ದುಲ್ ಖಾದರ್ ತನ್ನ ಬಿಡುವಿನ ಸಮಯದಲ್ಲಿ ರಸ್ತೆ ಬದಿ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಬೋರ್ಡ್ ಹಾಗೂ ಸ್ವಚ್ಛ ಭಾರತ ಯೋಜನೆಯ ಲೋಗೊ ಅಳವಡಿಸಿ ಸ್ವಚ್ಛತೆಯ ಪಾಠ ಮಾಡಿದ್ದಾರೆ. ಎಳೆಯ ವಯಸ್ಸಿನಲ್ಲಿಯೇ ಅಪಘಾತದಿಂದ ಕಾಲು ಕಳೆದುಕೊಂಡ ಶಾಲೆಗೆ ಹೋಗಲಾಗದೇ ಶಿಕ್ಷಣದಿಂದ ವಂಚಿತರಾದರು. ಬೆಳೆದು ದೊಡ್ಡವರಾದ ಮೇಲೆ ಜೀವನ ಸಾಗಿಸಲು ಬೀದಿ ಬದಿ ವ್ಯಾಪಾರ ವೃತ್ತಿ ಆರಂಭಿಸಿ ಜೀವನ ಸಾಗಿಸಲಾರಂಭಿಸಿದರು. ಸರಕಾರದಿಂದ ತ್ರಿ ಚಕ್ರದ ವಾಹನ ಸೌಲಭ್ಯ ಸಿಕ್ಕಿದ ಮೇಲೆ ಸುಳ್ಯದಿಂದ ಸಂಪಾಜೆ ವರೆಗೆ ಹಸಿ ಮೀನು ಹಾಗೂ ಬಟ್ಟೆ ವ್ಯಾಪಾರ ಆರಂಭಿಸಿ ಜೀವನದಲ್ಲಿ ಯಶಸ್ಸು ಕಂಡರು.
ಗೂನಡ್ಕ ಪರಿಸರದಲ್ಲಿ ಸ್ವಚ್ಛತೆ ಬಗ್ಗೆ ಏನಾದರೂ ಮಾಡಬೇಕೆಂದು ಆಲೋಚಿಸಿದ ಅವರು ಬ್ಯಾನರ್ ಅಳವಡಿಸಿ, ಕಸ ಹಾಕಲು ಬುಟ್ಟಿಗಳನ್ನು ಇಟ್ಟಿದ್ದಾರೆ. ಸ್ವಚ್ಛ ಭಾರತ ಕಲ್ಪನೆಯ ಗಾಂಧೀಜಿಯ ಕನ್ನಡಕದ ಮಾದರಿ ಹಾಕಿ ಪ್ರವಾಸಿಗರು ಒಮ್ಮೆ ನಿಂತು ನೋಡುವಂತೆ ಮಾಡಿದ್ದಾರೆ. ಅಲ್ಲಿ ಬಂದವರಿಗಂತೂ ಸ್ವಚ್ಛತೆಯ ಪಾಠ ಮಾಡಿದ ಅನುಭವವಾಗದಿರದು.
“ಇಲ್ಲಿ ಪ್ರವಾಸಿಗರು ಬೀಸಾಡಿ ಹೋಗುವ ಪ್ಲಾಸ್ಟಿಕ್ ಹಾಗೂ ಕಸಗಳನ್ನು ಕಂಡು ಇದಕ್ಕೆ ಏನಾದರೂ ಪರಿಹಾರ ಮಾಡಬೇಕೆಂದು ಆಲೋಚಿಸಿದಾಗ ಈ ಕಲ್ಪನೆ ಬಂತು ಎನ್ನುತ್ತಾರೆ” ಅಬ್ದುಲ್ ಖಾದರ್.