Ad Widget

ಗುತ್ತಿಗಾರು : ಮೂಲೆಗುಂಪಾಗಿರುವ ಸರ್ಕಾರಿ ಯೋಜನೆ – ವರ್ಷ ಕಳೆದರೂ ಉಪಯೋಗಕ್ಕೆ ಸಿಗದ ಜಿಮ್ ಕೇಂದ್ರ

ಗುತ್ತಿಗಾರು. ಎ.4: ಸರ್ಕಾರಿ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಏನಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ ಗುತ್ತಿಗಾರು ಗ್ರಾ.ಪಂ ಮೂಲಕ ಸ್ಥಾಪನೆಯಾದ ಗರಡಿ ಮನೆ. ಉದ್ಘಾಟನೆಗೊಂಡು ವರ್ಷ ಕಳೆದರೂ ಉಪಯೋಗಕ್ಕೆ ಸಿಗದ ಈ ಗರಡಿಮನೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

. . . . .


ಗ್ರಾಮವಿಕಾಸ ಯೋಜನೆಯಲ್ಲಿ ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ಪಂಚಾಯತ್ ಗಳಿಗೆ ಸರಕಾರ ಸ್ಥಳೀಯ ಮಟ್ಟದಲ್ಲಿ ಜಿಮ್ ಸ್ಥಾಪನೆಗೆ ಅನುದಾನ ನೀಡಿತ್ತು. ಅದರಂತೆ ಸುಬ್ರಹ್ಮಣ್ಯ ಹಾಗೂ ಗುತ್ತಿಗಾರು ಎರಡೂ ಪಂಚಾಯತ್ ಗಳಲ್ಲಿ ಜಿಮ್ ಸ್ಥಾಪನೆ ಮಾಡಿ ಉದ್ಘಾಟನೆಯನ್ನೂ ಮಾಡಲಾಗಿತ್ತು. ಕಳೆದ ವರ್ಷ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಮ್ ಘಟಕವನ್ನು ಉದ್ಘಾಟಿಸಿ ಸಾರ್ವಜನಿಕ ಉಪಯೋಗಕ್ಕೆ ಅನುಮತಿಸಿದ್ದರು. ಸುಬ್ರಹ್ಮಣ್ಯದಲ್ಲಿ ಸ್ಥಾಪಿಸಿದ ಜಿಮ್ ಸಾರ್ವಜನಿಕರಿಗೆ ಉಪಯೋಗಕ್ಕೆ ಲಭ್ಯವಾಗಿದ್ದು, ಗುತ್ತಿಗಾರಿನಲ್ಲಿ ಸ್ಥಾಪಿಸಿದ ಜಿಮ್ ಮಾತ್ರ ಉಪಯೋಗಿಸಲಾಗದೇ ಮೂಲೆಗುಂಪಾಗಿದೆ. ಹತ್ತು ಲಕ್ಷ ಮೊತ್ತದ ಯೋಜನೆಯು ಇಂದು ತುಕ್ಕು ಹಿಡಿಯುವ ಸ್ಥಿತಿಗೆ ತಲುಪಿದೆ.

ಟ್ರೈನರ್ ಲಭ್ಯರಿಲ್ಲ: ಗುತ್ತಿಗಾರಿನಲ್ಲಿ ಜಿಮ್ ಗೆ ಬರಲು ಯುವಜನತೆ ತಯಾರಿದ್ದರೂ ಸರಿಯಾದ ಟ್ರೈನರ್ ಇಲ್ಲದ ಕಾರಣ ಗರಡಿಮನೆಗೆ ಬರಲು ಮನಸ್ಸು ಮಾಡುತ್ತಿಲ್ಲ. ಸರ್ಕಾರವೇನೋ ಜಿಮ್ ಸ್ಥಾಪನೆಗೆ ಅನುದಾನ ಮಂಜೂರು ಮಾಡಿ ಸಲಕರಣೆಗಳ ಪೂರೈಕೆಯನ್ನು ಮಾಡಿದೆ. ಆದರೆ ಜಿಮ್ ನಿರ್ವಹಣೆ ಹೇಗೆ ಎಂಬುದರ ಬಗ್ಗೆ ಸೂಕ್ತ ನಿರ್ದೇಶನ ನೀಡಿಲ್ಲ. ಪಂಚಾಯತ್ ಮೂಲಕ ನಡೆಸಲು ಅವಕಾಶವೂ ಇಲ್ಲ. ತರಬೇತುದಾರರು ಸಿಕ್ಕಿದರೂ ಅವರಿಗೆ ಸಂಭಾವನೆ ಹೇಗೆ ಎಂಬುದರ ಬಗ್ಗೆಯೂ ಪ್ರಸ್ತಾವನೆ ಇಲ್ಲದಿರುವುದು ಪಂಚಾಯತ್ ಗೆ ತಲೆನೋವಾಗಿ ಪರಿಣಮಿಸಿದೆ.

ಹೊರಗುತ್ತಿಗೆ ನೀಡಬಹುದೇ?: ಸುಬ್ರಹ್ಮಣ್ಯದಲ್ಲಿನ ಜಿಮ್ ಅನ್ನು ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದ್ದು, ಅವರೇ ತರಬೇತಿ ನೀಡಿ ಜಿಮ್ ಗೆ ಬರುವವರಿಂದ ಶುಲ್ಕ ಪಡೆದುಕೊಳ್ಳುತ್ತಿದ್ದಾರೆ. ಪಂಚಾಯತ್ ಗೆ ಇಂತಿಷ್ಟು ಮೊತ್ತವನ್ನು ಪಾವತಿಸಲಾಗುತ್ತದೆ. ಗುತ್ತಿಗಾರುನಲ್ಲೂ ಇಂತದ್ದೇ ಕ್ರಮ ಕೈಗೊಳ್ಳಲು‌ ಪಂಚಾಯತ್ ನಿರ್ಧರಿಸಿದ್ದರೂ ಗುತ್ತಿಗೆ ಪಡೆದುಕೊಳ್ಳಲು ಜನ ಬರದಿರುವುದು ಸಮಸ್ಯೆಯಾಗಿದೆ. ಒಟ್ಟಾರೆ ಸರ್ಕಾರಿ ಅನುದಾನವೊಂದು ನಿರುಪಯುಕ್ತವಾಗಿರುವುದು ಯೋಜನೆಗಳ ಅನುಷ್ಟಾನದಲ್ಲಿನ ದೂರಾಲೋಚನೆಯ ಕೊರತೆ ಎಂಬುವುದರಲ್ಲಿ ಸಂಶಯವಿಲ್ಲ.

ಜಿಮ್ ಸ್ಥಾಪನೆಗೆ ಸರ್ಕಾರ ಅನುದಾನ ಮಂಜೂರು ಮಾಡಿ ಘಟಕ ಸ್ಥಾಪನೆಯನ್ನು ಮಾಡಲಾಗಿದೆ. ಆದರೆ ಇದರ ನಿರ್ವಹಣೆಗೆ ನಿರ್ದೇಶನವಿಲ್ಲ. ಉತ್ತಮ ತರಬೇತುದಾರರು ಲಭ್ಯರಿದ್ದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡಲಾಗುವುದು- ಶ್ಯಾಂ ಪ್ರಸಾದ್ ಎಂ.ಆರ್, ಪಿಡಿಒ ಗುತ್ತಿಗಾರು.

*ಸರ್ಕಾರಿ ಯೋಜನೆ ಅನುಪಯುಕ್ತವಾಗಿರುವುದು ದುರದೃಷ್ಟಕರ, ಜಿಮ್ ಸಾರ್ವಜನಿಕ ಉಪಯೋಗಕ್ಕೆ ಮುಕ್ತವಾದಲ್ಲಿ, ಯುವಜನತೆಗೆ ದೈಹಿಕ ವ್ಯಾಯಾಮಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ – ಸತೀಶ್ ಮೂಕಮಲೆ, ಪೂರ್ವಾಧ್ಯಕ್ಷರು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!