Ad Widget

ಮಸೂದೆಯ ಬಗ್ಗೆ ಚರ್ಚೆಗೆ ಅವಕಾಶ ನೀಡದೆ ಸುಗ್ರೀವಾಜ್ಞೆಯ ಮೂಲಕ ದೇಶದ ಜನತೆಯ ಮೇಲೆ ದಬ್ಬಾಳಿಕೆ ಸರಿಯಲ್ಲ – ಕೆಪಿ ಜೋನಿ

ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಕರ್ನಾಟಕ ಬಂದ್ ಪ್ರತಿಭಟನೆಯ ಅಂಗವಾಗಿ ಸುಳ್ಯ ತಾಲೂಕಿನ ರೈತ ಹಾಗೂ ಕಾರ್ಮಿಕ ಸಂಘಟನೆಗಳು ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ನಡೆದ ಕೇಂದ್ರ ಸರಕಾರದ ರೈತ ಮಸೂದೆ ತಿದ್ದುಪಡಿ ವಿರೋಧಿಸಿ ಸೆ.೨೮ರಂದು ಪ್ರತಿಭಟನಾ ಸಭೆ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಿತು. ಸಭೆಗೂ ಮುನ್ನ ಸುಳ್ಯ ಜ್ಯೋತಿ ವೃತ್ತದಿಂದ ಗಾಂಧಿನಗರದವರೆಗೆ ಕಾಲ್ನಡಿಗೆ ಮೂಲಕ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆಯನ್ನು ಕೂಗಿ ನೂರಾರು ಮಂದಿ ಪ್ರತಿಭಟನಾಕಾರರು ಪ್ರತಿಭಟನಾ ರ್‍ಯಾಲಿಯನ್ನು ನಡೆಸಿದರು. ಸಭೆಯ ಆರಂಭದಲ್ಲಿ ಪ್ರಸ್ತಾವಿಕ ಮಾತನಾಡಿದ ಕಾರ್ಮಿಕ ಮುಂಖಡ ಕೆ.ಪಿ ಜಾನಿ ಕಾರ್ಮಿಕರುಗಳಾದ ನಾವು ದಿನದಲ್ಲಿ ಎಂಟು ಗಂಟೆಗಳ ಕಾಲ ದುಡಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಕಾರ್ಮಿಕ ಕಾಯಿದೆಯನ್ನು ತಿದ್ದುಪಡಿ ಮಾಡಿ ಹನ್ನೆರಡು ಗಂಟೆ ದುಡಿಯುವ ಪರಿಸ್ಥಿತಿಯನ್ನು ಈ ಕೇಂದ್ರ ಸರಕಾರವು ತಂದೊಡ್ಡಿದೆ. ಇದು ಕಾರ್ಮಿಕ ವಿರೋಧಿ ಕಾಯ್ದೆ ಅಲ್ಲವೇ ಎಂದು ಪ್ರಶ್ನಿಸಿದರು. ಯಾವುದೇ ಮಸೂದೆಗಳನ್ನು ಜಾರಿ ತರುವ ಮುನ್ನ ಅದರ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ಮನಸ್ಸಿಗೆ ಬಂದಂತೆ ಮಸೂದೆಗಳನ್ನು ತಿದ್ದುಪಡಿ ಮಾಡಿ ಕಂಪೆನಿಗಳ ಲಾಭಕ್ಕಾಗಿ ರೈತರನ್ನು ಬಲಿ ಕೊಡುವುದು ಸರಿಯಲ್ಲ ಎಂದು ಆಕ್ರೋಶದ ನುಡಿಗಳನ್ನಾಡಿದರು.

. . . . . . .

ನಂತರ ಮಾತನಾಡಿದ ಸುಳ್ಯ ತಾಲೂಕು ರೈತ ಸಂಘಟನೆಯ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಮಾತನಾಡಿ ದೇಶದ ಬೆನ್ನುಲುಬಾಗಿರುವ ರೈತರನ್ನು ಸಂಕಷ್ಟಕ್ಕೆ ದೂಡಿ ಖಾಸಗಿ ಕಂಪೆನಿಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ರೈತಪರ ಮಸೂದೆಗಳನ್ನು ತಿದ್ದುಪಡಿ ಮಾಡುವ ಮೂಲಕ ದೇಶದ ರೈತರೊಂದಿಗೆ ದೇಶವನ್ನೇ ನಾಶ ಮಾಡಲು ಈಗಿನ ಸರಕಾರಗಳು ಹೊರಟಿದೆ. ಇದಕ್ಕೆ ಅವಕಾಶವನ್ನು ನಾವು ರೈತರು ನೀಡುವುದಿಲ್ಲ, ನ್ಯಾಯ ಸಿಗುವವರೆಗೆ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ರೈತರ ಪರ ನಡೆಯುವ ಈ ಹೋರಾಟಕ್ಕೆ ವಿವಿಧ ಸಂಘಟನೆ ಮತ್ತು ರಾಜಕೀಯ ಪಕ್ಷಗಳು ಬೆಂಬಲವನ್ನು ನೀಡಿರುವುದು ರೈತರಿಗೆ ತಂದ ಜಯವಾಗಿದೆ ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭಾರತ ಪ್ರಜಾಸತ್ತಾತ್ಮಕ ಸಂಘಟನೆಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ದೇಶದ ಪ್ರಧಾನಿ ಮೋದಿಯವರು ರೈತರು ಕಟ್ಟಿದ ದೇಶವನ್ನು ಕಾರ್ಪೋರೇಟರ್ ಕಂಪೆನಿಗಳಿಗೆ ಮಾರಾಟ ಮಾಡಿ ಅದಾನಿ ಅಂಬಾನಿಯವರಂತಹ ಶ್ರೀಮಂತರ ಕೈಯಲ್ಲಿ ದೇಶವನ್ನು ಕೊಡಲು ಪ್ರಾರಂಭಿಸಿದ್ದಾರೆ. ಸುಳ್ಯದ ಮಣ್ಣಿನಲ್ಲಿ ಹೋರಾಟದ ಕಿಚ್ಚನ್ನು ಹಬ್ಬಿಸಿದ ಅದೆಷ್ಟೋ ನಾಯಕರು ಹುಟ್ಟಿಂತಹ ನಾಡಾಗಿದೆ ಸುಳ್ಯ. ಇದೇ ಸುಳ್ಯದಿಂದ ಮಂಗಳೂರಿನ ಬಾವುಟಗುಡ್ಡೆಯವರೆಗೆ ಮುಂದಿನ ದಿನಗಳಲ್ಲಿ ಬೃಹತ್ ಪಾದಾಯಾತ್ರೆಯನ್ನು ಮಾಡುವುದರ ಮೂಲಕ ಸುಳ್ಯದ ರೈತ ಶಕ್ತಿಯನ್ನು ತೋರಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ಮುಖಂಡ ಎಂ. ವೆಂಕಪ್ಪ ಗೌಡ ಮಾತನಾಡಿ ಹಲವಾರು ಸಂದರ್ಭಗಳಲ್ಲಿ ಹಸಿರು ಸೇನೆಯ ರೈತರಿಗೆ ಜಯ ಸಿಕ್ಕಿದೆ. ರೈತರ ಹೋರಾಟ ಇಲ್ಲಿಯವರೆಗೆ ಸೋಲು ಕಂಡಿದಿಲ್ಲ. ರೈತ ಮಸೂದೆಗಳನ್ನು ತಿದ್ದುಪಡಿಯನ್ನು ಮಾಡಿ ಎಂಪಿಎಂಸಿಯಲ್ಲಿ ದಲ್ಲಾಳಿಗಳ ವ್ಯವಹಾರಗಳು ನಡೆಯುತ್ತಿದೆ ಎಂದು ಅಪವಾದ ಮಾಡುವವರಲ್ಲಿ ನನ್ನದೊಂದು ಪ್ರಶ್ನೆಯಿದೆ. ಸುಳ್ಯ ಹಾಗೂ ಪುತ್ತೂರು ತಾಲೂಕಿನ ಮತ್ತು ವಿವಿಧೆಡೆಗಳಲ್ಲಿ ಎಂಪಿಎಂಸಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿಯ ಪಕ್ಷದವರೇ ವಹಿಸಿಕೊಂಡಿದ್ದು, ಹಾಗಾದರೆ ಇವೆರೆಲ್ಲರೂ ದಲ್ಲಾಳಿಗಳೇ ಎಂದು ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಪ್ರಶ್ನೆಯನ್ನು ಮಾಡಿದರು. ಭಾರತ ಆತ್ಮನಿರ್ಭರ ಕಾರ್ಯಕ್ರಮವೆಂದು ಭಾರತವನ್ನು ಬರ್ಬರ ಮಾಡಲು ಮೋದಿ ಸರ್ಕಾರ ಹೊರಟಿದೆ ಎಂದು ಆರೋಪ ಹೊರಿಸಿದರು. ನಮ್ಮ ಪ್ರತಿಭಟನೆಗೆ ಇವರಿಗೆ ಕೆಲಸವಿಲ್ಲವೆಂದು ಬಿಜೆಪಿಯವರು ದೂರುತ್ತಿದ್ದಾರೆ. ಆದರೆ ದೇಶದ ಪ್ರಧಾನಿಯಾಗಿರುವ ಮೋದಿಯವರು ದೇಶದ ಜನತೆಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಫಸಲ್‌ವಿಮಾ ಯೋಜನೆಯಲ್ಲಿ 5 ಪೈಸೆಯನ್ನು ನೀಡದ ಇವರು ಕೇಂದ್ರ ಸರಕಾರ ರೈತರಿಗೆ ಬಂಪರ್ ನೀಡಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆಂದು ಆಕ್ರೋಶಭರಿತರಾಗಿ ಮಾತನಾಡಿದರು.
ಜೆಡಿಎಸ್ ಪಕ್ಷದ ರಾಜ್ಯಸಮಿತಿಯ ಉಪಾಧ್ಯಕ್ಷ ಎಂ.ಬಿ ಸದಾಶಿವ ಮಾತನಾಡಿ ದೇಶದ ಸಂಪತ್ತನ್ನೆಲ್ಲ ಖಾಸಗಿಯವರಿಗೆ ನೀಡಿ ಇದೀಗ ಆಹಾರ ಧಾನ್ಯಗಳ ದಾಸ್ತಾನುಗಳನ್ನು ಖಾಲಿ ಮಾಡಲು ಕೇಂದ್ರ ಸರಕಾರವು ಹೊರಟಿದೆ. ಚಿನ್ನ ಪೆಟ್ರೋಲಿಯಂ, ಬ್ಯಾಂಕಿಂಗ್, ಏರ್‌ರ್ಪೋರ್ಟ್ ಎಲ್ಲವನ್ನು ಖಾಸಗೀಕರಣ ಮಾಡಿ ಇದೀಗ ರೈತರ ಹಕ್ಕನ್ನು ಕೂಡಾ ಕಸಿದು ರೈತರ ಭೂಮಿಯನ್ನು ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡಲು ಹೊರಟಿರುವುದು ದೇಶದ ಅಧಃಪತನಕ್ಕೆ ಕಾರಣವಾಗಲಿದೆ ಎಂದರು. ಆತ್ಮವಿಲ್ಲದವರು ಆತ್ಮನಿರ್ಭರದ ಬಗ್ಗೆ ಮಾತನಾಡುತ್ತಿದ್ದರೆ ಎಂದ ಇವರು ಎಪಿಎಂಸಿ ರದ್ದಾದರೆ ಖಾಸಗಿಯವರು ಬಂದು ನಮ್ಮ ರೈತರನ್ನು ಮತ್ತು ನಮ್ಮನ್ನು ಆಳ್ವಿಕೆ ಮಾಡುತ್ತಾರೆ ಎಂದು ಅವರು ಮಸೂದೆಯ ತಿದ್ದುಪಡಿಯ ವಿರುದ್ಧ ಪ್ರತಿಭಟಿಸಿ ಮಾತನಾಡಿದರು.
ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ದೀಕ್ಷಿತ್ ಜಯನಗರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯದ ಬದಲು ಕಂಪೆನಿಗಳ ಸ್ವರಾಜ್ಯವನ್ನಾಗಿ ಈಗಿನ ಸರಕಾರಗಳು ಮಾಡಲು ಹೊರಟಿದೆ ಡಾ| ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಕಡೆಗಡಿಸಿ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಅವರು ಹೇಳಿದರು. ದಲಿತ ಸಂಘದ ಮುಖಂಡ ನಾರಾಯಣ ತೊಡಿಕಾನ ಈ ಸಂದರ್ಭದಲ್ಲಿ ಮಾತನಾಡಿ ರೈತ ವಿರೋಧಿ ಖಾಯಿದೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ರೈತ ಸಂಘದ ಮುಖಂಡ ತೀರ್ಥರಾಮ ಉಳುವಾರು ವಂದಿಸಿದರು. ನೂರಾರು ಮಂದಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!