ಪ್ರಧಾನಿ ನರೇಂದ್ರ ಮೋದಿ ಅವರು ಇಂದು 70ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ದೇಶವಲ್ಲದೆ ಆಚೆಗೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡವರು. ಇವರ ಆಡಳಿತ ವೈಖರಿ, ಮಾತಿನ ಶೈಲಿ ಯುವಪೀಳಿಗೆಯನ್ನು ಹುಚ್ಚೆಬ್ಬಿಸುತ್ತಿದೆ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಛಾತಿಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಇಂದು (ಸೆ.17) ಅವರ 70ನೇ ಜನ್ಮದಿನವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದಾಮೋದರ ದಾಸ್ ಮೂಲಚಂದ್ ಮೋದಿ ಹಾಗೂ ಹೀರಾಬೆನ್ ಎಂಬ ದಂಪತಿಯ ಮಗ. ಈ ದಂಪತಿಗೆ 6 ಜನ ಮಕ್ಕಳು. ಇವರಲ್ಲಿ ಮೂರನೆಯ ಮಗನೇ ನರೇಂದ್ರ ಮೋದಿ. ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಪ್ರಧಾನಿಗೆ ಇದ್ದಾರೆ. ಇವರು ರಾಜ್ಯಶಾಸ್ತ್ರದಲ್ಲಿ ಪದವಿ ಪೂರೈಸಿದ್ದಾರೆ. ಚಿಕ್ಕಂದಿನಿಂದ ಬಡ ಕುಟುಂಬದಲ್ಲಿಯೇ ಬೆಳೆದ ಇವರು, ತಂದೆಯೊಂದಿಗೆ ಚಹಾ ಮಾರಿದ್ದರು.
ಆ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದರು. ಆ ನಂತರ ತಮ್ಮ ಜೀವವನ್ನೆಲ್ಲ ದೇಶಕ್ಕಾಗಿಯೇ ಮುಡಿಪಾಗಿಟ್ಟರು. 1987ರಲ್ಲಿ ಅವರ ಸಂಘದ ನಿರ್ದೇಶನದಂತೆ ಬಿಜೆಪಿ ಸೇರ್ಪಡೆಗೊಂಡಿದ್ದರು.
1995ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಲು ಅಂದು ಮೋದಿ ಅವರ ತಂತ್ರಗಾರಿಕೆ ಕೂಡ ಕೆಲಸ ಮಾಡಿತ್ತು. ಆ ನಂತರ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಬೆಳೆದರು. 1998ರಲ್ಲಿ ಗುಜರಾತ್ ನಲ್ಲಿ ಬಿಜೆಪಿ ಗೆಲ್ಲಲು ಮೋದಿಯೇ ಕಾರಣ. 2001ರಲ್ಲಿ ಮೋದಿ ಅವರು ಗುಜರಾತ್ ಸಿಎಂ ಆದ ಸಂದರ್ಭದಲ್ಲಿ ಗೋದ್ರಾ ಹತ್ಯಾಕಾಂಡ ನಡೆದಿತ್ತು. ಇದರಿಂದ ದೇಶದಲ್ಲಿ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಆದರೆ, ಮೋದಿ ಅವರು ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದಿದ್ದರು. ಹೀಗಾಗಿ ಬಿಜೆಪಿಯಲ್ಲಿ ಅವರಿಗೆ ದೊಡ್ಡ ಗೌರವ ಸಿಗಲು ಪ್ರಾರಂಭವಾಯಿತು.
2014ರಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ ಯುವ ಪೀಳಿಗೆ, ಬಿಜೆಪಿಯ ಬೆನ್ನು ಬಿದ್ದಿತು. ಹೀಗಾಗಿ ಬಿಜೆಪಿ ಭರ್ಜರಿಯಾಗಿ ಜಯ ಗಳಿಸಿತು. ಆ ನಂತರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದರು. ನೋಟು ಅಮಾನ್ಯೀಕರಣ, ಜಿಎಸ್ ಟಿ ಜಾರಿಗೆ ತಂದರು. ಜನಧನ್ ಮೂಲಕ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದರು. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತವನ್ನು ಜನಾಂದೋಲನವಾಗಿ ರೂಪಿಸಿದರು.
ಸಂಸತ್ ಪ್ರವೇಶಿಸಿದ ಕೂಡಲೇ ಪ್ರಧಾನಿಯಾದ ಹೆಗ್ಗಳಿಕೆ ಮೋದಿ ಅವರಿಗಿದೆ. ನೇರವಾಗಿಯೇ ಸಿಎಂ ಆಗಿ, ಆ ನಂತರ ಚುನಾವಣೆಗೆ ಸ್ಪರ್ಧಿಸಿದ ಮೊದಲ ವ್ಯಕ್ತಿಯಾಗಿ ಮೋದಿ ಗುರುತಿಸಿಕೊಂಡಿದ್ದಾರೆ. 13 ವರ್ಷ ಗುಜರಾತ್ ನಲ್ಲಿ ಸಿಎಂ ಆಗಿ ಕಾರ್ಯಭಾರ ಮಾಡಿದ ಸಾಧನೆ ಮಾಡಿದ್ದಾರೆ. ರಾಜ್ಯವೊಂದರ ಸಿಎಂ ಪ್ರಧಾನಿಯಾದ ಹೆಗ್ಗಳಿಕೆ ಕೂಡ ಇವರಿಗಿದೆ. ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸೇತರ ನಾಯಕ ಪ್ರಧಾನಿಯಾದ ಮೊದಲ ವ್ಯಕ್ತಿ ನರೇಂದ್ರ ಮೋದಿ ಆಗಿದ್ದಾರೆ. ಅಷ್ಟೇ ಅಲ್ಲದೇ, ಒಂದು ಅವಧಿ ಪೂರ್ಣಗೊಳಿಸಿ ಎರಡನೇ ಅವಧಿಗೂ ಸ್ಪಷ್ಟ ಬಹುಮತ ಪಡೆದು ಪ್ರಧಾನಿಯಾದ ಮೊದಲ ಕಾಂಗ್ರೆಸೇತರ ಪ್ರಧಾನಿ ಕೂಡ ಇವರೇ ಆಗಿದ್ದಾರೆ.