ದ.ಕ. ಜಿಲ್ಲಾಡಳಿತ ಕೊಡಮಾಡುವ ಪ್ರೌಢಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಂಜ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪದವೀಧರ ಸಹಾಯಕ ಟೈಟಸ್ ವರ್ಗೀಸ್ ಆಯ್ಕೆಯಾಗಿ ಸೆ. 5ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿರುತ್ತಾರೆ.
ಕಡಬ ತಾಲೂಕಿನ ಕುಟ್ರುಪ್ಪಾಡಿ ಸುಧಾಮ ಆಚಾರಿಪಾಲ್ ನಲ್ಲಿ ಸಿ.ಎಂ. ವರ್ಗೀಸ್ ಮತ್ತು ಶ್ರೀಮತಿ ಮರಿಯಮ್ಮ ವರ್ಗೀಸ್ ದಂಪತಿಯ ಪುತ್ರನಾಗಿ 1967 ಜ. 27 ರಂದು ಜನಿಸಿದ ಟೈಟಸ್ ವರ್ಗೀಸ್ ರವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡಬ ಸ.ಹಿ.ಪ್ರಾ. ಶಾಲೆಯಲ್ಲಿ ಪೂರೈಸಿ, ಸ.ಪ.ಪೂ. ಕಾಲೇಜು ಕಡಬದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಕುಕ್ಕೆ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು. ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದರು. ಬಳಿಕ ಬೆಳಗಾವಿಯ ಚಿಕ್ಕೋಡಿ ಬಿ.ಕೆ. ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿಯನ್ನು ಪಡೆದು ಚಿಕ್ಕಮಗಳೂರಿನ ಎಂ.ಎಲ್.ಎಂ.ಎನ್. ಕಾಲೇಜಿನಲ್ಲಿ ಬಿ.ಎಡ್ ಪದವಿಯನ್ನು ಪಡೆದು ಬಳಿಕ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಎಂ.ಎಸ್ಸಿ ಪದವಿಯನ್ನು ಪೂರೈಸಿದರು. 1996ರಲ್ಲಿ ಸವಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಸೇವೆಗೆ ಸೇರ್ಪಡೆಗೊಂಡು 8 ವರ್ಷಗಳ ಬಳಿಕ 2003ರಲ್ಲಿ ಪಂಜ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶಿಕ್ಷಕರಾಗಿ ವರ್ಗಾವಣೆಗೊಂಡು ಒಟ್ಟು 25 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಸೇವಾದಳದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ತಾಲೂಕು ಮತ್ತು ಜಿಲ್ಲಾ ಸೇವಾದಳ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಜೆ.ಸಿ.ಐ, ಲಯನ್ಸ್, ಐ.ಎಸ್.ಸಿ. ಸಂಸ್ಥೆಗಳಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿರುವ ಟೈಟಸ್ ವರ್ಗೀಸ್ ರವರು ಪಂಜ ಪ್ರೌಢಶಾಲಾ ವಿಭಾಗದಲ್ಲಿ ಆರ್ಯಭಟ ಗಣಿತ ಮತ್ತು ವಿಜ್ಞಾನ ಪ್ರಯೋಗ ಶಾಲೆಯನ್ನು ಸ್ವಂತ ಹಣ ವ್ಯಯಿಸಿ ಮತ್ತು ಸಹೋದ್ಯೋಗಿಗಳ ಸಹಕಾರದಿಂದ ನಿರ್ಮಿಸಿ ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದರು. ಶಾಲೆಯಲ್ಲಿ ಹೂದೋಟ, ತರಕಾರಿ ತೋಟ, ಮಳೆಕೊಯಿಲು ಪ್ರಾತ್ಯಕ್ಷಿಕೆ ಸೇರಿದಂತೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರ ಪತ್ನಿ ಶ್ರೀಮತಿ ಸೈನಾ ಟೈಟಸ್ ರವರು ಎಲ್.ಎಲ್.ಬಿ. ಪದವೀಧರರು. ಪುತ್ರ ತೇಜಸ್ವಿ ವಿ.ಟಿ.ಯವರು ಕಾರವಾರದಲ್ಲಿ ಮೂರನೇ ವರ್ಷದ ಎಂ.ಬಿ.ಬಿ.ಎಸ್. ಪದವಿಯನ್ನು ಓದುತ್ತಿದ್ದರೆ ಪುತ್ರಿ ಕು. ಶ್ರದ್ಧಾ ವಿ.ಟಿ. ಕಡಬದಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.