

ಭೂಸುಧಾರಣಾ ಕಾಯಿದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯಿದೆ ಮತ್ತು ಇತರೆ ಕಾಯ್ದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಪಾಜೆಯಿಂದ ಮಂಗಳೂರಿಗೆ ವಿಶೇಷ ಜಾಥಾ ನಡೆಯಲಿದೆ ಎಂದು ರೈತ ಸಂಘದ ಅಧ್ಯಕ್ಷರಾದ ಲೋಲಜಾಕ್ಷ ಭೂತಕಲ್ಲು ಹೇಳಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟ ದಕ್ಷಿಣಕನ್ನಡ ಇದರ ಆಶ್ರಯದಲ್ಲಿ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯಿದೆ ಕಾರ್ಮಿಕ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆಗಳ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಹಾಗೂ ಮೇಲ್ಜಾತಿಯವರಿಗೆ 10% ಮೀಸಲಾತಿ ಕುರಿತು ಜಿಲ್ಲಾಮಟ್ಟದ ವಿಚಾರಗೋಷ್ಠಿ ಮತ್ತು ಸಂವಾದವು ಇದೇ ಸೆಪ್ಟೆಂಬರ್ 11ರಂದು ಬಿಸಿ ರೋಡಿನ ಹೋಟೆಲ್ ರಂಗೋಲಿ ಸಭಾಭವನದಲ್ಲಿ ಜರುಗಲಿದೆ ಎಂದರು. ವಿವಿಧ ಕಾಯ್ದೆಗಳು ಸೇರಿದಂತೆ ಇತರ ವಿಚಾರಗಳ ಬಗ್ಗೆ ವಿಚಾರಗೋಷ್ಠಿ ಮತ್ತು ಸಂವಾದ ಜರುಗಲಿದ್ದು ನೆರೆಪರಿಹಾರ, ರೈತರ ಆತ್ಮಹತ್ಯೆ, ಸಾಲಮನ್ನಾ ವಿಚಾರಗಳಲ್ಲಿ ಸರ್ಕಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವಶ್ಯವೆಂದರು.
ತಾಲೂಕು ಕಾರ್ಮಿಕ ಸಂಘ ಮುಖಂಡ ಕೆ.ಪಿ.ಜಾನಿ ಮಾತನಾಡಿ, ಈ ಹಿಂದಿನ ‘ಉಳುವವನೇ ಹೊಲದೊಡೆಯ’ ರಾಜ್ಯದಲ್ಲಿ ಸುಮಾರು 80 ಲಕ್ಷ ರೈತರು ಕೃಷಿ ಚಟುವಟಿಕೆಗಳಿಗೆ ಆಕರ್ಷಿತರಾಗಿದ್ದು, ಪ್ರಸ್ತುತ ಸರ್ಕಾರದ ರೈತವಿರೋಧಿ ಕಾಯ್ದೆಗಳಿಂದ ಫಸಲಿಗಿಂತ ಅಸಲಿಗೆ ಖರ್ಚು ಜಾಸ್ತಿ ಎಂಬಂತಾಗಿದೆ ಎಂದರು. ಇಂತಹ ಜನವಿರೋಧಿ ಕಾಯ್ದೆ ಹಾಗೂ ಕಾರ್ಪೊರೇಟ್ ಕಂಪೆನಿಗಳ ಮೂಲಕ ಖಾಸಗೀಕರಣಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ಧ್ವನಿಯೆತ್ತಬೇಕಾಗಿದ್ದು, ಈ ನಿಟ್ಟಿನಲ್ಲಿ ಆಗಸ್ಟ್ 19ರಂದು ಬಂಟ್ವಾಳದಲ್ಲಿ ಒಕ್ಕೂಟದ ಉದ್ಘಾಟನೆಯಾಗಿದೆ ಎಂದರು.
ರೈತ ಜಿಲ್ಲಾ ಸಂಘದ ಉಪಾಧ್ಯಕ್ಷರಾದ ದಿವಾಕರ ಪೈ ಮಾತನಾಡಿ, ರೈತರು ಹಳದಿ ರೋಗ ಮತ್ತು ಮಂಗಗಳ ಕಾಟದಿಂದ ಹೈರಾಣಾಗಿದ್ದು ಬೆಳೆಗಳ ರಕ್ಷಣೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಶಾಸಕರು ಸುಬ್ರಹ್ಮಣ್ಯದಲ್ಲಿ ‘ಮಂಕಿ ಪಾರ್ಕ್’ ನಿರ್ಮಾಣ ಕಾರ್ಯದ ಭರವಸೆಯನ್ನು ನೀಡಿದ್ದರೂ ಅದು ಈಡೇರುವ ಕಾಲ ಸನ್ನಿಹಿತವಾಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅರಂತೋಡು ತೊಡಿಕಾನ ವಲಯ ರೈತ ಸಂಘದ ಕಾರ್ಯದರ್ಶಿ ಮೋಹನ ಅಡ್ತಲೆ, ತಾಲೂಕು ರೈತ ಸಂಘದ ಸಂಚಾಲಕ ಸೆಬಾಸ್ಟಿನ್ ಹಾಗೂ ದಲಿತ ಸಂಘದ ಹರಿಶ್ಚಂದ್ರ ಪಂಡಿತ್ ಉಪಸ್ಥಿತರಿದ್ದರು.