” ಗುರು ಬ್ರಹ್ಮ ಗುರುರ್ವಿಷ್ಣು ಗುರು ದೇವೋ ಮಹೇಶ್ವರ:
*ಗುರು ಸಾಕ್ಷಾತ್ ಪರ:ಬ್ರಹ್ಮ ತಸ್ಮೈಶ್ರೀ ಗುರುವೇ ನಮಃ” ಹಿಂದಿನ ಕಾಲದಲ್ಲಿ ಇಂತಹ ಶ್ಲೋಕಗಳನ್ನು ಹಾಡಿ ಹೊಗಳುತ್ತಾ ಗುರುಗಳಿಗೆ ಮಹತ್ವ ಪೂರ್ಣ ಸ್ಥಾನ ಕೊಟ್ಟಿದ್ದರು.ಹಿಂದಿನ ಕಾಲದಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ಆದರ್ಶ ವ್ಯಕ್ತಿಗಳಾಗಿದ್ದರು. ಆ ಸಮಯದಲ್ಲಿ ಗುರು-ಶಿಷ್ಯರ ಸಂಬಂಧ ಹಾಲು ಜೇನಿನಂತೆ ಇತ್ತು. ಆದರೆ ಇತ್ತೀಚೆಗೆ ಇಂತಹ ಗುರು ಶಿಷ್ಯರ ಬಾಂಧವ್ಯ ಕಾಣಸಿಗುವುದು ಬೆರಳೆಣಿಕೆಯಷ್ಟು ಮಾತ್ರ ಎಂಬುದು ದುಃಖಕರ ವಿಷಯ.
“ವಿದ್ಯಾರ್ಥಿಗಳ ಬಾಳ ಹೊಂಬೆಳಕು ಶಿಕ್ಷಕರು” ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. “ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ” ಎಂಬ ಮಾತು ಅಕ್ಷರಶಃ ಸತ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ನದಿ ದಾಟಿಸುವ ನಾಯಕರು ಹೌದು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಗುರಿ ಕಟ್ಟಿ ಕೊಡುವವರು ಶಿಕ್ಷಕರು.
ಬಾಲ್ಯದಲ್ಲಿದ್ದಾಗ ವಿದ್ಯಾರ್ಥಿಗಳ ಕೈ ಹಿಡಿದು ನವಣಕ್ಕಿಯಲ್ಲಿ ಬರೆಸಿದವರು ಶಿಕ್ಷಕರು. ಅಕ್ಷರ ಅಭ್ಯಾಸವ ಮಾಡಿಸಿ, ಸಣ್ಣ ಪುಟ್ಟ ಮಕ್ಕಳ ತುಂಟಾಟ, ಕೀಟಲೆಗಳನ್ನೆಲ್ಲವ ಸಹಿಸಿಕೊಂಡು, ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು, ವಿದ್ಯಾರ್ಥಿಗಳಿಗೆ ಬದುಕಿನ ಪಾಠಗಳನ್ನು ಸಣ್ಣ ಕಥೆಗಳ ರೂಪದಲ್ಲಿದೆ ವಿವರಿಸುವ ನಿಸ್ವಾರ್ಥ ಮಾರ್ಗದರ್ಶಕರು ಶಿಕ್ಷಕರು.ಸರಿ ತಪ್ಪುಗಳ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿ, ತಿದ್ದಿ ಬುದ್ಧಿ ಹೇಳುವವರು ಶಿಕ್ಷಕರು.
ಪ್ರಾಥಮಿಕ ಹಂತದಲ್ಲಿ ನೀತಿ ಪಾಠಗಳನ್ನು ಕಲಿಸುವವರು ಶಿಕ್ಷಕರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅಂತಹ ಮೌಲ್ಯಯುತ ಜೀವನ ಪಾಠ ಹೇಳಿಕೊಡುವುದು ತುಂಬಾ ವಿರಳ. ವಿದ್ಯಾರ್ಥಿಗಳ ಒಳ್ಳೆಯ ಪ್ರತಿಭೆಗಳಿಗೆ ಬೆಳಕು ಚೆಲ್ಲುವವರು ಶಿಕ್ಷಕರು. ವಿದ್ಯಾರ್ಥಿಗಳ ಒಳ್ಳೆಯ ಆಸಕ್ತಿಗಳಿಗೆ ಪ್ರೋತ್ಸಾಹ ನೀಡುವವರು ಶಿಕ್ಷಕರು.
ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ರೂಪಿಸುವವರು ಶಿಕ್ಷಕರು. ಹಾಗೆಯೇ ಸ್ವಾವಲಂಬಿ ಜೀವನ ನಡೆಸಲು ಮತ್ತು ಸುಸಂಸ್ಕೃತ ಜೀವನದ ಪಾಠಗಳನ್ನು ಕಲಿಸುವವರು ಶಿಕ್ಷಕರು. ವಿದ್ಯಾರ್ಥಿಗಳು ಸೋತಾಗ ಆತ್ಮಸ್ಥೈರ್ಯ ತುಂಬಿ, ಧೈರ್ಯ ಹೇಳಿ ಪ್ರೋತ್ಸಾಹಿಸುವವರು ಶಿಕ್ಷಕರು. ಗೆದ್ದಾಗ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ,ಉತ್ತೇಜಿಸುವವರು ಶಿಕ್ಷಕರು.
ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದರ ಬಗ್ಗೆ ತಿಳಿ ಹೇಳುವವರು ಶಿಕ್ಷಕರು. ಶಿಕ್ಷಕರು ತಮ್ಮ ಎಲ್ಲಾ ನೋವು, ದುಃಖವ ಮರೆತು ವಿದ್ಯಾರ್ಥಿಗಳಿಗಾಗಿ ನಗು ನಗುತ್ತಾ ಬೋಧಿಸುವರು. ಹಲವಾರು ಮಹಾನ್ ಸಾಧಕರ ಜೀವನ ಚರಿತ್ರೆಯನ್ನು ನಿಖರವಾಗಿ ತಿಳಿಸಿ ವಿದ್ಯಾರ್ಥಿಗಳನ್ನು ಅವರಂತೆಯೇ ಮುಂದೆ ಸಾಧನೆ ಮಾಡಲು ಉತ್ತೇಜಿಸುತ್ತಾರೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಉತ್ತಮ ಸಾಧಕರನ್ನಾಗಿ ರೂಪಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುತ್ತಾರೆ. ವಿದ್ಯಾರ್ಥಿಗಳನ್ನು ದೇಶದ ಒಳ್ಳೆಯ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು.
“ಒಂದು ಕಲ್ಲು ಸುಂದರವಾದ ಮೂರ್ತಿಯಾಗಿ ಮಾರ್ಪಾಡು ಮಾಡಲು ಅದರ ಹಿಂದೆ ಒಬ್ಬ ಅತ್ಯುತ್ತಮ ಶಿಲ್ಪಿ ಇದ್ದೆ ಇರುತ್ತಾರೆ.” ಅದರಂತೆಯೇ ಒಬ್ಬ ವಿದ್ಯಾರ್ಥಿಯ ಸಾಧನೆಯ ಬೆನ್ನ ಹಿಂದೆ ಶಿಕ್ಷಕರು ಅಥವಾ ಗುರು ಎಂಬ ಶಿಲ್ಪಿ ಇದ್ದೆ ಇರುತ್ತಾರೆ. ಶಿಕ್ಷಕರು ವಿದ್ಯಾರ್ಥಿಯನ್ನು ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವ ಶಿಲ್ಪಿ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಜೀವನದಲ್ಲಿ ಹಲವಾರು ರೀತಿಯಲ್ಲಿ ಮಹತ್ತರ ಪಾತ್ರ ವಹಿಸುವ ಶಿಕ್ಷಕರಿಗೆ ಕೃತಘ್ನನಾಗಿರದೆ ಕೃತಜ್ಞನಾಗಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರವು ಮಹತ್ವ ಪೂರ್ಣವಾದುದು.
ಎ.ಪಿ.ಜೆ ಅಬ್ದುಲ್ ಕಲಾಂ, ಸರ್ವಪಲ್ಲಿ ರಾಧಾಕೃಷ್ಣನ್ ಇಂತಹ ಮಹಾನ್ ವಿದ್ವಾಂಸರು ಶಿಕ್ಷಕರ ಸ್ಥಾನಕ್ಕೆ ಉನ್ನತವಾದ ಗೌರವ ತಂದುಕೊಟ್ಟಿದ್ದಾರೆ. ಹಾಗೆಯೇ ಅಂತಹುದೇ ಹಾದಿಯಲ್ಲಿ ಅನೇಕ ಶಿಕ್ಷಕರು, ಪ್ರಾಧ್ಯಾಪಕರು, ಮಹನೀಯರು ಸೇವೆ ಸಲ್ಲಿಸಿದ್ದಾರೆ. ಭಾರತದ ಅಗ್ರಗಣ್ಯ ಶಿಕ್ಷಕ, ಮಾಜಿ ರಾಷ್ಟ್ರಪತಿ, ಶಿಕ್ಷಕ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ.
ವಿದ್ಯಾರ್ಥಿ ಜೀವನದಲ್ಲಿ ಅನೇಕ ರೀತಿಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಪ್ರತಿಯೊಬ್ಬ ಶಿಕ್ಷಕರಿಗೂ,
ಅಧ್ಯಾಪಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
✍️ ಸೌಮ್ಯ.ಸಿ.ಡಿ.ಎಲಿಮಲೆ ಕೆ.ಎಸ್.ಎಸ್.ಕಾಲೇಜು ಸುಬ್ರಹ್ಮಣ್ಯ