ಕಾಸರಗೋಡು:ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಸುವ ಪ್ರಮುಖ ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ.
ಕಾಸರಗೋಡು ಹಾಗೂ ಮಂಗಳೂರು ಸಂಪರ್ಕಿಸುವ ಬೆರಿಪದವು, ಪಾದೆಕಲ್ಲು, ಮುಗುಳಿ, ಪದ್ಯಾಣ ಮತ್ತಿತರ ಪ್ರಮುಖ ಸಂಪರ್ಕ ರಸ್ತೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವದಲ್ಲಿ ಈ ರೀತಿ ಬಂದ್ ಮಾಡಲಾಗಿದೆ.
ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಬಾಧಿತ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದಿಢೀರ್ ಈ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಕಾಸರಗೋಡು ಜಿಲ್ಲೆಗೆ ಇತರ ರಾಜ್ಯಗಳಿಂದ ಬರುವವರಿಗೆ ಹಾಗೂ ಕಾಸರಗೋಡಿನಿಂದ ಇತರ ರಾಜ್ಯಗಳಿಗೆ ತೆರಳುವವರಿಗೆ ತಲಪಾಡಿ ಚೆಕ್ ಪೋಸ್ಟ್ ಮೂಲಕ ಪಾಸ್ ವ್ಯವಸ್ಥೆ ಮಾಡಿದ್ದರೂ ಸರಕಾರದ ಆದೇಶವನ್ನು ಮೀರಿ ದಕ್ಷಿಣ ಕನ್ನಡ ಜಿಲ್ಲೆ ತೆರಳುವ, ಹಿಂತಿರುಗುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಚೆರ್ಕಳ ಕಲ್ಲಡ್ಕ ರಾಜ್ಯ ಹೆದ್ದಾರಿ ಬಂಟ್ವಾಳ ತಾಲೂಕು ಕೇಪು ಗ್ರಾ.ಪಂ ವ್ಯಾಪ್ತಿಯ ಸಾರಡ್ಕ ಚೆಕ್ ಪೋಸ್ಟ್ ಹಾಗೂ ಪಾಣಾಜೆಯ ಚೆಕ್ ಪೊಸ್ಟ್ ತೆರವು ಗೊಳಿಸುವ ಬಗ್ಗೆ ಕಾಸರಗೋಡು ಗಡಿಭಾಗದ ಜನರು ಒತ್ತಾಯಿಸುತ್ತಿರುವುದರ ನಡುವೆ ಕಾಸರಗೋಡು ಜಿಲ್ಲಾಡಳಿತ ಕರ್ನಾಟಕ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿದೆ.