ಸುಳ್ಯದ ಶ್ರೀರಾಂ ಪೇಟೆಯಲ್ಲಿರುವ ಜನಪ್ರಿಯವಾದ ಹೋಟೆಲ್ ರಾಮ್ ಪ್ರಸಾದ್ ನ ಮಾಲಕ ಸುಂದರ ಸರಳಾಯ ಜೂ. 27 ರಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು .ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.
ಅತೀ ಕಡಿಮೆ ದರದಲ್ಲಿ ಉತ್ತಮ ಊಟ ನೀಡುತ್ತಿದ್ದ ಇವರ ಹೋಟೆಲ್ ಗೆ ಬಡವನಿಂದ ಹಿಡಿದು ಶ್ರೀಮಂತ ವರೆಗಿನ ಜನ ಬಂದು ಊಟ ಮಾಡಿ ಹೋಗುತ್ತಿದ್ದರು.ಬಡವರಿಗೆ ವರದಾನವಾಗಿ ಕಳೆದ ಎಂಟು ದಶಕಗಳಿಂದ ಅತೀ ಕಡಿಮೆ ಬೆಲೆಗೆ ಅತ್ಯಂತ ರುಚಿಕರ ಅನ್ನವನ್ನಿತ್ತ ಮತ್ತು ಅನ್ನವನ್ನಿಡುತ್ತಿರುವ ಹೋಟೆಲ್ ಸರಳಾಯರ ರಾಮ್ ಪ್ರಸಾದ್ . ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಿದ್ದರೂ ಬೆಲೆಯನ್ನು ಹೆಚ್ಚಿಸದೇ ಜನರಿಗೆ ಕೇವಲ ಹತ್ತು ರೂಪಾಯಿಯಲ್ಲಿ ಅನ್ನ,ಸಾಂಬಾರ್,ಗಸಿ,ಪಲ್ಯ,ಉಪ್ಪಿನಕಾಯಿ, ಹೊಟ್ಟೆ ತಂಪಿಗೆ ಮಜ್ಜಿಗೆ ನೀಡಿ ಸುಳ್ಯ ಭಾಗದಲ್ಲಿ ಜನಮನ್ನಣೆ ಪಡೆದಿದೆ ರಾಮ್ ಪ್ರಸಾದ್.
1938 ರಂದು ಸುಂದರ ಸರಳಾಯರ ತಂದೆ ವೆಂಕಟೇಶ್ವರ ಸರಳಾಯರು ಮುಳಿ ಹುಲ್ಲಿನಲ್ಲಿ ಕಟ್ಟಿ ಬೆಳೆಸಿದ ಹೊಟೇಲ್ ಇಂದೂ ರುಚಿಯಾದ ಊಟಕ್ಕೆ ಹೆಸರುವಾಸಿಯಾಗಿದೆ. ಜೊತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮದಲ್ಲೂ ಇದರ ಬಗ್ಗೆ ವರದಿಯಾಗಿದೆ.
ಹೊಟೇಲ್ ಪ್ರಾರಂಭದ ದಿನದಲ್ಲಿ ನಾಲ್ಕಾಣೆಗೆ ಭರ್ಜರಿ ಊಟ ಸಿಗುತ್ತಿದ್ದ ಹೋಟೇಲಿನಲ್ಲಿ ಇಂದು ಅದೇ ಮೌಲ್ಯದ ಹತ್ತು ರೂಪಾಯಿಗೆ ಊಟ ಸಿಗುತ್ತಿದೆ. ದಿನಕ್ಕೆ ಇನ್ನೂರರಿಂದ ಮುನ್ನೂರು ಜನರಿಗೆ ಹತ್ತು ರೂನಲ್ಲಿ ಹೊಟ್ಟೆ ತುಂಬಾ ಊಟ ಬಡಿಸುವುದು ಸುಂದರ ಸರಳಾಯರ ಹೆಸರನ್ನು ಸುಂದರಗೊಳಿಸಿತ್ತು. ಜೊತೆಗೆ ಅವರ ಮಗ ರಾಘವೇಂದ್ರ ಭಟ್ ಕೂಡಾ ಹೊಟೇಲ್ ನಲ್ಲಿ ದುಡಿಯುತ್ತಿದ್ದಾರೆ. ಹತ್ತಿರದಲ್ಲಿ ಇರುವ ಜೂನಿಯರ್ ಕಾಲೇಜು ಹಾಗೂ ಇನ್ನಿತರ ಕಾಲೇಜಿನ ವಿದ್ಯಾರ್ಥಿಗಳ, ಅಂಗಡಿಗಳ ನೌಕರರ ಮೊದಲ ಆಯ್ಕೆ ಸರಳಾಯರ ರಾಮ್ ಪ್ರಸಾದ್ ಹೋಟೆಲ್. ಆದರೇ ಈಗ ಅವರ ಹೋಟೆಲ್ ನಲ್ಲಿ ಅವರಿಲ್ಲ. ಅವರ ಮೌಲ್ಯ ,ನಡೆನುಡಿ ,ಗುಣಗಳನ್ನು ಮಗನಿಗೆ ಅರ್ಪಿಸಿ ಹೋಗಿದ್ದಾರೆ.ಅವರ ಹೋಟೆಲ್ ನಲ್ಲಿ ಊಟ ಮಾಡಿದ ಪ್ರತಿಯೊಬ್ಬರಿಗೂ ಸರಳಾಯರ ನಿಧನ ನೋವು ತಂದಿರದೇ ಇರದು. ಅವರ ನೆನಪು ಸದಾ ಉಳಿಯಲಿ ಸರಳಾಯರ ಹೋಟೆಲ್ ನಲ್ಲಿ ಇನ್ನೂ ಮುಂದೆಯೂ ಅಂತಹ ಸೇವೆ ಈ ಸುಳ್ಯದ ಜನತೆಗೆ ಸಿಗುವಂತಾಗಲಿ.