ಎರಡು ವಾರದ ಹಿಂದೆ ಸುಳ್ಯ ಪೊಲೀಸ್ ಠಾಣೆಗೆ ಬಂದು ಕಟ್ಟೆಕಾರ್ ಅಂಗಡಿಯವರ ಮಗನ ಮೇಲೆ ದೂರು ನೀಡಿದ್ದ ಬೆಂಗಳೂರಿನ ಮಹಿಳೆ ಈಗ ಮಹಿಳಾ ಆಯೋಗದ ಆದೇಶ ಹಿಡಿದುಕೊಂಡು ಸುಳ್ಯಕ್ಕೆ ಬಂದಿದ್ದು ಪೊಲೀಸರು ಮತ್ತು ಸಿ.ಡಿ.ಪಿ.ಒ. ರವರು ಈಗ ಅವರನ್ನು ಕಟ್ಟೆ ಅಬ್ದುಲ್ಲರವರ ಮನೆಗೆ ಬಿಟ್ಟಿದ್ದಾರೆ. ಆದರೆ ಆಕೆಯನ್ನು ಮನೆ ಸೇರಿಸಲು ನಿರಾಕರಿಸಿರುವ ಕಟ್ಟೆ ಅಬ್ದುಲ್ಲ ಅವರ ಮನೆಯವರು ಮನೆಗೆ ಬೀಗ ಹಾಕಿಕೊಂಡು ಬೇರೆ ಕಡೆಗೆ ಹೋಗಿದ್ದಾರೆ. ಆ ಮಹಿಳೆ ಮನೆಯ ಜಗುಲಿಯಲ್ಲಿ ಕುಳಿತಿದ್ದು, ಪೊಲೀಸರು ಮನೆಯಂಗಳದಲ್ಲಿ ಕಾವಲು ನಿಂತಿದ್ದಾರೆ.
ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ತನ್ನನ್ನು ಮದುವೆಯಾಗಿದ್ದು ಅವನೊಂದಿಗೆ ಮತ್ತೆ ನನ್ನನ್ನು ಸೇರಿಸಬೇಕು ಎಂದು ಕೇಳಿಕೊಂಡು ಎರಡು ವಾರದ ಹಿಂದೆ ಬೆಂಗಳೂರಿನ ಮಹಿಳೆ ಸುಳ್ಯ ಪೊಲೀಸ್ ಠಾಣೆಗೆ ಬಂದಿದ್ದರು. ಮಂಗಳೂರಿಗೆ ಎಸ್ಪಿ ಕಚೇರಿಗೆ ಹೋಗಿ ಅಲ್ಲಿಂದ ಸುಳ್ಯ ಠಾಣೆಗೆ ಬಂದಿದ್ದ ಮಹಿಳೆಯನ್ನು ಠಾಣೆಯಲ್ಲಿ ಕೂರಿಸಿದ ಪೋಲೀಸರು ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಮತ್ತು ಮನೆಯವರನ್ನು ಠಾಣೆಗೆ ಕರೆಸಿದ್ದರು. ಆ ಮಹಿಳೆಯೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಖಲೀಲ್ ಹೇಳಿಕೆ ನೀಡಿ ಆಕೆಯನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದರು. ಬಳಿಕ ಪೊಲೀಸರ ಸಲಹೆಯಂತೆ ಆಕೆ ಬೆಂಗಳೂರಿಗೆ ವಾಪಸಾಗಿದ್ದಳು.
ಜೂನ್ 22 ರಂದು ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ “ತನ್ನ ಗಂಡನಾದ ಸುಳ್ಯದ ಕಟ್ಟೆಕಾರ್ ಇಬ್ರಾಹಿಂ ಖಲೀಲ್ ರವರ ಇಚ್ಛೆಯ ಮೇರೆಗೆ ವಿವಾಹಕ್ಕೂ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 12.7.2017ರಲ್ಲಿ ಇಬ್ರಾಹಿಂ ಖಲೀಲ್ ರವರನ್ನು ವಿವಾಹವಾಗಿರುತ್ತೇನೆ. 15.1.2020ರವರೆಗೆ ನಮ್ಮ ಕೌಟುಂಬಿಕ ಜೀವನವು ಕೌಟುಂಬಿಕ ಜೀವನವು ಚೆನ್ನಾಗಿಯೇ ಇತ್ತು. ಸುಳ್ಯಕ್ಕೆ ಬಂದ ನಂತರ ಖಲೀಲ್ ರವರು ನನ್ನೊಂದಿಗೆ ಸಂಪೂರ್ಣವಾಗಿ ಸಂಬಂಧವನ್ನು ಬಿಟ್ಟಿರುತ್ತಾರೆ. ಪತಿಯ ಮನೆಯವರು ಕೂಡ ಅವರಿಗೆ ಸಹಕಾರ ನೀಡುತ್ತಿರುವುದರಿಂದ ನಾನು ಆರ್ಥಿಕ ಮತ್ತು ಕೌಟುಂಬಿಕ ಜೀವನವನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ತನ್ನನ್ನು ಸುಳ್ಯದಲ್ಲಿರುವ ಪತಿಯ ಮನೆಗೆ ಸೇರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರೆನ್ನಲಾಗಿದೆ.
ಮಹಿಳಾ ಆಯೋಗದ ಅಧ್ಯಕ್ಷರೊಡನೆ ಮಹಿಳೆಯ ಸಮಾಲೋಚನೆ ನಡೆಸಿ ವಿನಂತಿ ಮಾಡಿಕೊಂಡ ಮೇರೆಗೆ ಅರ್ಜಿದಾರರನ್ನು ಆಕೆಯ ಪತಿಯ ಮನೆಗೆ ಸೇರಿಸಿ ಕಾನೂನು ನೆರವು ಹಾಗೂ ಅಗತ್ಯ ಕ್ರಮ ಕೈಗೊಂಡು ಆ ಕ್ರಮದ ಬಗ್ಗೆ ವರದಿಯನ್ನು 15 ದಿನಗಳೊಳಗೆ ಆಯೋಗಕ್ಕೆ ಕಳುಹಿಸಿಕೊಡುವಂತೆ ಅಧ್ಯಕ್ಷರು ಜೂ. ೨೪ರಂದು ಆದೇಶ ನೀಡಿದರು.
ಈ ಆದೇಶ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಜಾರಿಯಾಗಿ ಅವರ ಸೂಚನೆಯಂತೆ ಸುಳ್ಯದ ಸಿಡಿಪಿಒ ಮತ್ತು ಸುಳ್ಯದ ಎಸ್ .ಐ.ಯವರು ಜೂ. 25ರಂದು ಸಂಜೆ ಸುಳ್ಯಕ್ಕೆ ಬಂದ ಮಹಿಳೆಯನ್ನು ಕರೆದುಕೊಂಡು ಸುಳ್ಯದ ನಾವೂರು ರಸ್ತೆಯಲ್ಲಿರುವ ಕಟ್ಟೆ ಅಬ್ದುಲ್ಲರ ಮನೆಗೆ ಬಂದರು.
ಆ ವೇಳೆಗೆ ಮನೆಯವರು ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು . ಬಳಿಕ ಖಲೀಲ್ ಮತ್ತು ಮನೆಯವರನ್ನು ಪೋಲೀಸರು ಕರೆಸಿ ಹೇಳಿಕೆ ಪಡೆಯಲಾಯಿತು.
“ನಾನು ಆಕೆಯನ್ನು ಮದುವೆಯಾಗಿದ್ದೂ ಇಲ್ಲ . ಸಂಬಂಧ ಇಟ್ಟುಕೊಂಡಿದ್ದೂ ಇಲ್ಲ. ಸುಳ್ಳು ಹೇಳಿಕೊಂಡು ಬಂದ ಈಕೆಯನ್ನು ನಾವು ಮನೆಯೊಳಗೆ ಸೇರಿಸಿಕೊಳ್ಳುವುದೂ ಇಲ್ಲ” ಎಂದು ಖಲೀಲ್ ಮತ್ತು ಅವರ ಮನೆಯವರು ಹೇಳಿದರೆ, “ಇದು ನನ್ನ ಗಂಡನ ಮನೆ . ಅವರು ಮನೆಗೆ ಸೇರಿಸುವ ವರೆಗೆ ನಾನು ಇಲ್ಲೇ ಇರುತ್ತೇನೆ” ಎಂದು ಮಹಿಳೆ ಹೇಳಿಕೆ ನೀಡಿದರೆನ್ನಲಾಗಿದೆ.
ಎಸ್ಐ ಹರೀಶ್ ಮತ್ತು ಸಿಡಿಪಿಒ ಶ್ರೀಮತಿ ರಶ್ಮಿ ಅಶೋಕ್ ರವರು ಅವರಿಬ್ಬರ ಹೇಳಿಕೆಗಳನ್ನು ಪಡೆದು ಮಹಿಳೆ ಮನೆಯ ಜಗುಲಿಯಲ್ಲಿ ಕುಳಿತಿರುವ ಫೋಟೊ ತೆಗೆದು , ಪೊಲೀಸ್ ವಾಹನ ಹಾಗೂ ಎ.ಎಸ್.ಐ. ,ಮಹಿಳಾ ಪೋಲೀಸ್ ಸಹಿತ ಮೂವರು ಪೊಲೀಸರನ್ನು ಅಲ್ಲಿ ಕಾವಲು ನಿಲ್ಲಿಸಿ ಹೋದರು.
ಈ ಪ್ರಕ್ರಿಯೆ ನಡೆಯುವ ವೇಳೆ ಖಲೀಲ್ ಅವರ ಸಂಬಂಧಿಕರು, ಹಿತೈಷಿಗಳು ಹತ್ತಾರು ಸಂಖ್ಯೆಯಲ್ಲಿ ಸೇರಿದ್ದರು. “ಖಲೀಲ್ ಗೆ ಮದುವೆಯೇ ಆಗಿಲ್ಲ. ಫೇಸ್ ಬುಕ್ ಮೂಲಕ ಫ್ರೆಂಡ್ ಶಿಪ್ ಆಗಿದೆ ಎಂದು ಹೇಳಿ ಸುಳ್ಳು ಕಥೆ ಕಟ್ಟಿಕೊಂಡು ಬಂದಿರುವ ಮಹಿಳೆಯನ್ನು ಮನೆಯೊಳಗೆ ಸೇರಿಸಲು ಮಹಿಳಾ ಆಯೋಗ ಆದೇಶ ಮಾಡಿರುವುದು ತಪ್ಪು. ಖಲೀಲ್ ರನ್ನು ಕೂಡ ಕರೆದು ವಿಚಾರಿಸಬೇಕಿತ್ತು. ಅದನ್ನು ಮಾಡದೆ ಆಯೋಗ ಏಕಪಕ್ಷೀಯವಾಗಿ ವರ್ತಿಸಿದೆ” ಎಂದು ಅಲ್ಲಿ ಸೇರಿದ್ದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.