ಗಿಡನೆಟ್ಟು ಪೋಷಿಸಿ ಹೂ ಬಿಡುವುದನ್ನೇ ಕಾಯುತ್ತಿದ್ದ ಪುಷ್ಪಪ್ರೇಮಿಗಳಿಗೆ ಗಿಡದಲ್ಲಿ ಹೂವಿನ ಮೊಗ್ಗು ಕಂಡಾಗ ಸಂಭ್ರಮ ಜೊತೆಗೆ ಸಾರ್ಥಕ ಭಾವ ಮನೆ ಮಾಡುತ್ತದೆ. ಅದರೇ ಒಂದೋ ಎರಡೋ ವರ್ಷಕ್ಕೊಮ್ಮೆ ಹೂ ಬಿಡುವ ಬ್ರಹ್ಮಕಮಲ ಕಂಡರೇ ಎಷ್ಷು ಸಂತೋಷವಾಗಬಹುದಲ್ಲವೇ ?
ಅಂದಹಾಗೆ ಈ ಬ್ರಹ್ಮಕಮಲ ಅರಳಿದ್ದು ಗುತ್ತಿಗಾರು ಗ್ರಾಮದ ಅಮೆ ಮನೆ ವೀರಪ್ಪ ಗೌಡರ ಮನೆಯಲ್ಲಿ .
ಒಂದಷ್ಟು ಮಂದಿ ತಮ್ಮ ಮನೆ ಮುಂದೆ ಅರಳಿ ಬ್ರಹ್ಮಕಮಲ ಗಿಡಗಳೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟು ಖುಷಿ ಪಡುತ್ತಾರೆ. ಮಳೆಗಾಲದ ಆರಂಭದ ದಿನವಾಗಿರುವುದರಿಂದ ಹುಲುಸಾಗಿ ಬೆಳೆದ ಬ್ರಹ್ಮಕಮಲ ಗಿಡಗಳಲ್ಲಿ ಮೊಗ್ಗಾಗಿ ಹೂವಾಗಿ ಅರಳುವ ಸಮಯವೂ ಹೌದು.
ಗಿಡನೆಟ್ಟ ಪ್ರತಿ ಪುಷ್ಪಪ್ರೇಮಿಯಲ್ಲೂ ಹೂ ಅರಳುವುದನ್ನು ನೋಡುವ ತವಕ ಇದ್ದೇ ಇರುತ್ತದೆ. ಏಕೆಂದರೆ ಇದು ಇತರೆ ಹೂಗಿಡಗಳಂತೆ ಆಗಾಗ್ಗೆ ಹೂ ಬಿಡುವುದಿಲ್ಲ. ವರ್ಷಕ್ಕೋ… ಎರಡು ವರ್ಷಕ್ಕೊಮ್ಮೆಯೋ ಹೂ ಬಿಡುತ್ತದೆ. ಅದೂ ಕೂಡ ನಡು ರಾತ್ರಿಯಲ್ಲಿ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಡಲಾರಂಭಿಸುತ್ತವೆ. ಆಷಾಢದಲ್ಲಂತೂ ಗಿಡಗಳು ಒಂದಕ್ಕಿಂತ ಮತ್ತೊಂದು, ತನ್ನ ಸಾಮರ್ಥ್ಯ್ ಕ್ಕಿಂತಲೂ ಹೆಚ್ಚಿನ ಹೂಗಳನ್ನು ಬಿಟ್ಟು ಮನೆಯಂಗಳದಲ್ಲಿ ಶೋಭಿಸುತ್ತವೆ.ಹಾಗೆ ನೋಡಿದರೆ ಬ್ರಹ್ಮಕಮಲ ಎನ್ನುವುದು ಪುಷ್ಪಲೋಕದ ಅಚ್ಚರಿ ಎಂದರೆ ತಪ್ಪಾಗಲಾರದು. ಕ್ಯಾಕ್ಟಸ್ ಜಾತಿಗೆ ಸೇರಿದ ಬ್ರಹ್ಮಕಮಲದ ವೈಜ್ಞಾನಿಕ ಹೆಸರು ಎಪಿಫಿಲ್ಲಂ ಅಕ್ಸಿಪೆಟಲಂ.