ಕೊರೋನಾ ಮಹಾಮಾರಿ ವೈರಸ್ಸಿನ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಲವಾರು ರೀತಿಯ ಗೊಂದಲಗಳ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಬೇಕು ಬೇಡ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿತ್ತು. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಹಲವಾರು ಸವಾಲುಗಳನ್ನು ಎದುರಿಸಿ ಕೊನೆಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಹೆಜ್ಜೆಯನ್ನು ಇಟ್ಟಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರ್ನಾಟಕ ರಾಜ್ಯದಾದ್ಯಂತ ಸುತ್ತಿ ಸುಮಾರು 2000ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ದಿಟ್ಟ ಹೆಜ್ಜೆಯನ್ನು ಇಡುವ ಮೂಲಕ ಪರೀಕ್ಷೆಗೆ ಇಂದು ಚಾಲನೆ ನೀಡಲಾಯಿತು.
ಪರೀಕ್ಷೆ ನಡೆಸದಂತೆ ಹಲವಾರು ಸಂಘ-ಸಂಸ್ಥೆಗಳು, ಶಿಕ್ಷಣ ತಜ್ಞರು ಸರಕಾರಕ್ಕೆ ಮನವಿಯ ಮೇಲೆ ಮನವಿಯನ್ನು ಸಲ್ಲಿಸುತ್ತಿದ್ದರು. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ನೆರೆಯ ರಾಜ್ಯಗಳು ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರವು ಅದೇ ಹೆಜ್ಜೆಯನ್ನು ಇಡುವಂತೆ ಸೂಚನೆಗಳನ್ನು ನೀಡಿದರು. ಆದರೆ ಅವ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಶಿಕ್ಷಣ ಸಚಿವರು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವಂತೆ ಹಾಗೂ ಪರೀಕ್ಷೆ ನಡೆಸಲು ಪೂರಕವಾಗಿ ಸುಪ್ರೀಂಕೋರ್ಟಿನ ತೀರ್ಪು ಬರುವಲ್ಲಿ ಯಶಸ್ವಿ ಪಾತ್ರವನ್ನು ವಹಿಸಿದರು.ಇದರ ಹಿನ್ನೆಲೆಯಲ್ಲಿ ಇಂದು ಸುಳ್ಯ ತಾಲೂಕಿನಾದ್ಯಂತ ಆರು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳು ಕಾರ್ಯಾರಂಭಗೊಂಡ ಶಿಕ್ಷಕರು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಆಗಮನದೊಂದಿಗೆ ಶಾಲೆಯ ಆವರಣಗಳು ವಿದ್ಯಾರ್ಥಿಗಳಿಂದ ಕಂಗೊಳಿಸಲು ತೊಡಗಿದವು. ಸುಳ್ಯ ತಾಲೂಕು ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ರೂಪಿಸಿದ್ದು ಸರ್ಕಾರದ ನಿಯಮಾನುಸಾರ ವನ್ನು ಪಾಲಿಸುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ತೊಡಗಿಕೊಂಡಿದ್ದರು. ಪರೀಕ್ಷಾ ಕೇಂದ್ರಗಳಲ್ಲಿ ತಮ್ಮ ತಮ್ಮ ಶಾಲೆಯ ವಿದ್ಯಾರ್ಥಿಗಳು ಕೇಂದ್ರಗಳಿಗೆ ತಲುಪಿರುವುದನ್ನು ಶಾಲಾ ಶಿಕ್ಷಕರು ಖಚಿತ ಪಡಿಸಿಕೊಳ್ಳುತ್ತಿದ್ದರು. ಸುಳ್ಯ ನಗರ ವ್ಯಾಪ್ತಿಯಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಸುಳ್ಯ, ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ, ಸೆಂಟ್ ಜೋಸೆಫ್ ಸ್ಕೂಲ್ ಗಳಲ್ಲಿ, ಗ್ರಾಮಾಂತರ ಅರಂತೋಡು ಎನ್ ಎಮ್ ಪಿಯುಸಿ, ಸುಬ್ರಹ್ಮಣ್ಯ ಎಸ್ ಎಸ್ ಪಿಯು,ಬೆಳ್ಳಾರೆ ಸ.ಪ.ಪೂ ಕಾಲೇಜು, ಎಸೆಸೆಲ್ಸಿ ಪರೀಕ್ಷಾ ಕಲರವ ಕಂಡುಬರುತ್ತಿತ್ತು.ಜೂನಿಯರ್ ಕಾಲೇಜು ಸುಳ್ಯ ಮುಖ್ಯ ಪರೀಕ್ಷಕ ಅಧೀಕ್ಷರಾಗಿ ಅಜ್ಜಾವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ , ಸಹಾಯಕ ಅಧೀಕ್ಷಕರಾಗಿ ಜಯಶ್ರೀ ,ಗಾಂಧಿನಗರ ಕೇಂದ್ರಕ್ಕೆ ಎಣ್ಮೂರಿನ ಶಿಕ್ಷಕಿ ಶೀತಲ್, ಸುಳ್ಯ ಸೈಂಟ್ ಜೋಸೆಫ್ ಕೇಂದ್ರದಲ್ಲಿ ಸೂಫಿ ಪೆರಾಜೆ, ಅರಂತೋಡು ಪರೀಕ್ಷಾ ಕೇಂದ್ರದಲ್ಲಿ ಸೀತಾರಾಮ ಎಮ್ .ಕೆ, ಸುಬ್ರಹ್ಮಣ್ಯದಲ್ಲಿ ಯಶವಂತ್ ರೈ ,ಬೆಳ್ಳಾರೆ ಕೇಂದ್ರದಲ್ಲಿ ಉಮಾಕುಮಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈ ಬಾರಿಯ ೨೦೨೦ ವಿಧ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.